ಸಾರಾಂಶ
ಕುಶಾಲನಗರ : ಕೊಡಗು ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ ಬಿ.ಎಡ್ ಪದವಿ ಪರೀಕ್ಷಾ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಪರೀಕ್ಷೆ ಮುಗಿದು ಎಂಟು ದಿನಗಳಲ್ಲಿ ಮತ್ತು ಮೌಲ್ಯಮಾಪನ ಪೂರ್ಣವಾಗಿ ಒಂದು ದಿನದಲ್ಲಿ ಅತೀ ಶೀಘ್ರವಾಗಿ ಪ್ರಕಟಿಸಿದ ಹಿರಿಮೆಗೆ ಕೊಡಗು ವಿಶ್ವವಿದ್ಯಾಲಯ ಪಾತ್ರವಾಗಿದೆ.
ಫೆಬ್ರವರಿಯಲ್ಲಿ ಪರೀಕ್ಷೆ ನಡೆದಿತ್ತು. ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿ, ಜಿಲ್ಲೆ ಮತ್ತು ಹೊರಗಿನ ಮೌಲ್ಯಮಾಪಕರು ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಯಶಸ್ವಿಯಾಗಿ ನಡೆಸಲಾಗಿದ್ದು, ಬಿ.ಎಡ್ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು UUCMS ಅಥವಾ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ KUK.Karnataka.gov.in ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ.
ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಆನ್ಲೈನ್ ತಂತ್ರಾಂಶದಲ್ಲಿ ಅಧಿಕೃತವಾಗಿ ಪ್ರಕಟಿಸಿದರು.
ಇದೇ ಸಂದರ್ಭ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಸುರೇಶ್ ಎಂ., ಪರೀಕ್ಷಾಂಗದ ವಿಶೇಷಾಧಿಕಾರಿ ಪ್ರೊ. ರವಿಶಂಕರ್ ಎಂ.ಎನ್. ಮತ್ತು UUCMS ನೋಡಲ್ ಅಧಿಕಾರಿ ಗಗನ್ ಎಚ್.ಎಸ್. ಹಾಗೂ ಬೋಧಕರು ಉಪಸ್ಥಿತರಿದ್ದರು.