ವಿಶೇಷ ವರದಿ
ಕನ್ನಡಪ್ರಭ ವಾರ್ತೆ ನಾಪೋಕ್ಲು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನದಲ್ಲಿ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ ಏ. 23ರಿಂದ ಮೂರು ದಿನಗಳ ಕಾಲ ನಡೆಯಲಿದೆ.ನಾಪೋಕ್ಲು ಚೀಯಕಪೂವಂಡ ಕುಟುಂಬ ಐದನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯ ಸಾರಥ್ಯವಹಿಸಿದ್ದು ಜಿದ್ದಾಜಿದ್ದಿನ ಪೈಪೋಟಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈದಾನ ಸಜ್ಜುಗೊಳಿಸುವ ಅಂತಿಮ ಹಂತದ ಕಾರ್ಯಗಳು ಬುಧವಾರ ನಡೆದವು. ಮೈದಾನದ ಸಿದ್ಧತೆ, ಮಾರ್ಕಿಂಗ್, ಶಾಮಿಯಾನ ಅಳವಡಿಕೆ ಕಾರ್ಯಗಳು ನಡೆದವು.
ಕೊಡವ ಕುಟುಂಬಗಳ ನಡುವೆ ಚೇನಂಡ ಕಪ್ ಹಾಕಿ ಉತ್ಸವ ಇಲ್ಲಿನ ಜನರಲ್ ಕೆ.ಎಸ್..ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಕ್ರೀಡಾ ಪ್ರೇಮಿಗಳ ಮನಸೆಳೆಯುತ್ತಿದೆ. ಇದೀಗ ಚೀಯಕಪೂವಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯು ಅಪಾರ ಸಂಖ್ಯೆಯ ಕ್ರೀಡಾ ಪ್ರೇಮಿಗಳ ಮನಸೂರೆಗೊಳ್ಳಲಿದೆ.ಆರಂಭದ ವರ್ಷದಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಈ ಸ್ಪರ್ಧೆಗೆ ಚಾಲನೆ ನೀಡಿದರು. ತೀವ್ರ ಹೋರಾಟದ ರೋಚಕ ಹಗ್ಗ ಜಗ್ಗಾಟ ಸ್ಪರ್ಧೆಗೆ ಕ್ರೀಡಾ ಮನೋಭಾವದ ಜನಾಂಗದವರು ಇತರ ಕ್ರೀಡೆಗಳಂತೆ ಸಹಕಾರ ನೀಡಿದ್ದರು. ಎರಡನೇ ವರ್ಷದಿಂದ ಕೇರ್ ಬಲಿ ನಮ್ಮೆ ಮತ್ತಷ್ಟು ಜನಪ್ರಿಯತೆಗೆ ಸಾಕ್ಷಿಯಾಯಿತು. ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಕಾರದೊಂದಿಗೆ ವಿವಿಧ ಕುಟುಂಬಗಳು ಕ್ರೀಡಾಕೂಟ ಆಚರಿಸಲು ಮುಂದೆ ಬಂದವು. ಆರಂಭದ ವರ್ಷದಲ್ಲಿ 40 ಕುಟುಂಬಗಳು ಪಾಲ್ಗೊಂಡಿದ್ದವು. ನಂತರ 2023ರಲ್ಲಿ ಟಿ-ಶೆಟ್ಟಿಗೇರಿಯಲ್ಲಿ ನಡೆದ ಚಟ್ಟಂಗಡ ಕೇರ್ಬಲಿ ಉತ್ಸವದಲ್ಲಿ 171,
2024ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಬೊಟ್ಟೋಳಂಡ ಕುಟುಂಬದ ವರು ಆಯೋಜಿಸಿದ ಕ್ರೀಡಾಕೂಟದಲ್ಲಿ 230 ತಂಡಗಳು ಪಾಲ್ಗೊಂಡಿದ್ದವು ಕಳೆದ ವರ್ಷ 2025 ರಲ್ಲಿ ನಡೆದ ಬಾಳೆಕುಟ್ಟಿರ ಕಪ್ ಕ್ರೀಡೆಯಲ್ಲಿ 282 ಕುಟುಂಬಗಳು ಪಾಲ್ಗೊಂಡಿದ್ದವು.ಐದನೇ ವರ್ಷದ ಕೊಡವ ಕೌಟುಂಬಿಕ ಕೇರ್ಬಲಿ ನಮ್ಮೆ ಗುರುವಾರ ಉದ್ಘಾಟನೆಗೊಳ್ಳಲಿದೆ. ಪಟ್ಟಣದ ಪೊನ್ನಾಡ್ಳ್ ಸೂಪರ್ ಮಾರ್ಕೆಟ್ ಬಳಿಯಿಂದ ಕೆಪಿಎಸ್ ಶಾಲಾ ಮೈದಾನದವರೆಗೆ ಚೀಯಕಪೂವಂಡ ಕುಟುಂಬಸ್ಥರು, ಕೊಡವ ಟಗ್ ಆಫ್ ಅಕಾಡೆಮಿ, ತವರು ಮನೆ ಯುವತಿಯರು ಬಂಧುಗಳು ಊರಿನವರು ಮೆರವಣಿಗೆ ನಡೆಸಲಿದ್ದಾರೆ. ಅಕಾಡೆಮಿ ಪ್ರಮುಖರು ಆಯೋಜಕ ಕುಟುಂಬದವರು ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.ಕೇರ್ ಬಲಿ ನಮ್ಮೆ ಸ್ಪರ್ಧಾ ವಿಜೇತ ಕುಟುಂಬಕ್ಕೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ತಲಾ ಒಂದು ಲಕ್ಷ ನಗದು ಬಹುಮಾನ ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 75 ಸಾವಿರ ರು. ತೃತೀಯಸ್ಥಾನ ಪಡೆದ ತಂಡಕ್ಕೆ50 ಸಾವಿರ ರು. ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ. 5ನೇ ಸ್ಥಾನ ಪಡೆದು ತಂಡಕ್ಕೆ 20 ಸಾವಿರ ರೂ. ಹಾಗೂ 6ನೇ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು ಬಹುಮಾನ ಜೊತೆಗೆ ಎಲ್ಲ ವಿಜೇತರಿಗೆ ಟ್ರೋಫಿ ವಿತರಿಸಲಾಗುವುದು ಎಂದು ಉತ್ಸವ ಸಮಿತಿಯ ಅಧ್ಯಕ್ಷ ಚಿಯಕ ಬೋಂಡ ಕೆ ಬೋಪಣ್ಣ ತಿಳಿಸಿದರು.
ಈ ಬಾರಿ ವಿಶೇಷವಾಗಿ 16 ವಯೋಮಿತಿಯ ಒಳಗಿನ ಮಕ್ಕಳಿಗೆ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಇದರಲ್ಲಿ 22 ತಂಡಗಳು ಪಾಲ್ಗೊಂಡಿವೆ. ಪುರುಷರ ವಿಭಾಗದಲ್ಲಿ 189 ಕುಟುಂಬ ಹಾಗೂ ಮಹಿಳಾ ವಿಭಾಗದಲ್ಲಿ 85 ತಂಡಗಳು ಪಾಲ್ಗೊಳ್ಳಲು ನೋಂದಾಯಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ಅಕಾಡೆಮಿ ಪ್ರಮುಖರು ಚೀಯಕಪೂವಂಡ ಕೇರ್ ಬಲಿ ಉತ್ಸವ ಸಮಿತಿ ಪದಾಧಿಕಾರಿಗಳು ವಿವಿಧ ಸಮಿತಿಗಳ ಸದಸ್ಯರು ಕುಟುಂಬಸ್ಥರು ಉಪಸ್ಥಿತರಿದ್ದರು.ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ ಸಮಾರಂಭವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಸೋಮಯ್ಯ, ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಮೇದುರವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್ ಪಾಲ್ಗೊಳ್ಳುವರು.
ಕೇರ್ ಬಲಿ ನಮ್ಮೆ ಅಧ್ಯಕ್ಷ ಸಿ. ಕೆ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕುಟುಂಬದ ಪಟ್ಟೇದಾರ ಸಿ.ಎಂ.ಅಪ್ಪಚ್ಚು, ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಕಿರಣ್ ಪೊನ್ನಪ್ಪ ಉಪಸ್ಥಿತರಿರುವರು........ದಾಖಲೆ ನಿರ್ಮಾಣಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ ಈ ಬಾರಿ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಕಿರಣ್ ಪೊನ್ನಪ್ಪ ತಿಳಿಸಿದ್ದಾರೆ. ಕಳೆದ ವರ್ಷ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿತ್ತು. ವೈಯಕ್ತಿಕ ಸಾಧನೆಗಾಗಿ ಅಕಾಡೆಮಿ ಹಾಗೂ ಕಿರಣ್ ಪೊನ್ನಪ್ಪ ಅವರಿಗೆ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ಗೌರವ ನೀಡಿದ್ದು ಈ ಬಾರಿ ಅಧಿಕ ಸಂಖ್ಯೆಯ ತಂಡಗಳು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ಚೀಯಕಪೂವಂಡ ಕೇರ್ ಬಲಿ ನಮ್ಮೆ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಲಿದೆ ಎಂದು ಕಿರಣ್ ಪೊನ್ನಪ್ಪ ತಿಳಿಸಿದರು.