ಕೊಡವ ಕೌಟುಂಬಕಿ ಹಾಕಿ: ಹೆಚ್ಚಿನ ಅನುದಾನ ಬಿಡುಗಡೆ ಮನವಿ

| Published : Feb 01 2025, 12:01 AM IST

ಸಾರಾಂಶ

ಮುದ್ದಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ನೇತೃತ್ವ ವಹಿಸಿರುವ ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಮುಖರು ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾದರು. ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಉತ್ಸವಕ್ಕೆ ಸರ್ಕಾರದಿಂದ ರು.1.50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯಲ್ಲಿ ನಡೆಯಲಿರುವ 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ನೇತೃತ್ವ ವಹಿಸಿರುವ ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಮುಖರು ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾದರು. ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಉತ್ಸವಕ್ಕೆ ಸರ್ಕಾರದಿಂದ ರು.1.50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಹಾಕಿ ಉತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ನಂತರ ಕೊಡಗಿನ

ಸಾಂಪ್ರದಾಯಿಕ ಒಡಿಕತ್ತಿಯನ್ನು ಮುಖ್ಯಮಂತ್ರಿಗೆ ಕೊಡುಗೆಯಾಗಿ ನೀಡಿದರು. ಈ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತ‌ರ್ ಗೌಡ, ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಶ್ಮೀರ ಜಯ ಚಿಣ್ಣಪ್ಪ, ಸದಸ್ಯ ಸಂಪನ್ ಅಯ್ಯಪ್ಪ, ಮುದ್ದಂಡ ಕುಟುಂಬಸ್ಥರಾದ ಮುದ್ದಂಡ ರಾಯ್ ತಮ್ಮಯ್ಯ, ಮುದ್ದಂಡ ಡೀನ್ ಬೋಪಣ್ಣ, ಮುದ್ದಂಡ ರಂಜಿತ್ ಪೊನ್ನಪ್ಪ, ಮುದ್ದಂಡ ಅಶೋಕ್ ನಾಣಿಯಪ್ಪ, ಮುದ್ದಂಡ ಆದರ್ಶ್, ಮುದ್ದಂಡ ಚಂಗಪ್ಪ ಮತ್ತಿತರರು ಇದ್ದರು.

......................

ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಟ್ರಸ್ಟ್‌ ಆಗ್ರಹವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡಬೇಕೆಂದು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್‌ ಸರ್ಕಾರವನ್ನು ಆಗ್ರಹಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಕೃತಿ ಸಿರಿಬಳಗ ಟ್ರಸ್ಟ್‌ನ ಟ್ರಸ್ಟಿ ಕೆ.ಎಂ.ಗಣೇಶ್, ಒಂದು ಕಾಲದಲ್ಲಿ ಕೊಡಗು ರಾಜ್ಯವಾಗಿತ್ತು. ಬಳಿಕ ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ ಜಿಲ್ಲೆಯಾಗಿ ಪರಿವರ್ತಿತವಾಯಿತು. ಇಂತಹ ಪುಟ್ಟ ಕೊಡಗು, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ, ವಿಧಾನ ಪರಿಷತ್ತಿಗೆ ನಾಯಕರನ್ನು ನೀಡಿದ ಜಿಲ್ಲೆಯಾಗಿದೆ ಎಂದರು.ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲ ಘಟ್ಟದಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ನಂತರದ ವರ್ಷಗಳಲ್ಲಿ ಮೂರು ವಿಧಾನ ಸಭಾ ಕ್ಷೇತ್ರ ಎರಡಕ್ಕೆ ಇಳಿದು, ಕಳೆದ ಒಂದೂವರೆ ದಶಕಗಳಿಂದ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನವನ್ನು ಯಾವುದೇ ಸರ್ಕಾರ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲು ನಾವು ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನದೊಂದಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಸಿದ್ದರೂ ಸ್ಪಂದನ ದೊರಕಿರಲಿಲ್ಲ ಎಂದರು.ಸ್ಥಳೀಯರೇ ಸಚಿವರು ಮತ್ತು ಉಸ್ತುವಾರಿ ಸಚಿವರಾದರೆ, ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನ ಪ್ರಯತ್ನಗಳನ್ನು ನಡೆಸಬಹುದೆಂದು ಕೆ.ಎಂ.ಗಣೇಶ್ ಅಭಿಪ್ರಾಯಪಟ್ಟರು. ಪ್ರಸ್ತುತ ಕೊಡಗು ಅತಿವೃಷ್ಟಿ ಸೇರಿದಂತೆ ಹಲವಾರು ಸಂಕಷ್ಟಗಳೊಂದಿಗೆ ಜನಾಂಗಗಳ ನಡುವಿನ ಭಿನ್ನಾಭಿಪ್ರಾಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಂತಿ ಮತ್ತು ಸೌಹಾರ್ದಯುತ ವಾತಾವರಣ ನಿರ್ಮಿಸುವ ಜವಾಬ್ದಾರಿ ಹೊತ್ತವರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಟೀಕಿಸಿದರು.

ಸಂಸ್ಕೃತಿ ಸಿರಿ ಬಳಗದ ಉಪಾಧ್ಯಕ್ಷ ಕೋಲೆಯಂಡ ನಿಶಾ ಮೋಹನ್ ಮಾತನಾಡಿ, ಬಳಗ ಕಳೆದ ಒಂದು ವರ್ಷದ ಹಿಂದೆ ರಚನೆಯಾಗಿದ್ದು, ಇದರ ಮೂಲ ಉದ್ದೇಶ ಈ ನೆಲದ ಸಂಸ್ಕೃತಿ ಸಂರಕ್ಷಣೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದೇ ಆಗಿದೆ ಎಂದರು.ಬಳಗದ ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಸದಸ್ಯರಾದ ಡೆನ್ನಿ ಬರೋಸ್, ಸುಶೀಲಾ ಮಧು ಹಾಗೂ ಮಂಜುಳ ಶಿವಕುಮಾ‌ರ್ ಇದ್ದರು.