ಉತ್ತರ ಕೊಡಗಿಗೆ ತಲುಪಿದ ಕೊಡವರ ಬೃಹತ್ ಪಾದಯಾತ್ರೆ

| Published : Feb 06 2025, 12:16 AM IST

ಸಾರಾಂಶ

ಕೊಡವಾಮೆ ಬಾಳೋ ಪಾದಯಾತ್ರೆ ನಾಲ್ಕನೇ ದಿನ ಉತ್ತರ ಕೊಡಗಿಗೆ ಆಗಮಿಸಿತು. ಹಲವರು ಚಪ್ಪಡ್ಕ ದೇವರನ್ನು ನಮಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡವಾಮೆ ಹಾಗೂ ಕೊಡವ ಸಂಸ್ಕೃತಿಯ ವಿರುದ್ಧ ನಿರಂತರ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆ ಸೇರಿದಂತೆ ಕೊಡವ ಭಾಷಿಕ ಸಮುದಾಯಗಳು ಕುಟ್ಟಾದಿಂದ ಮಡಿಕೇರಿಯವರೆಗೆ ಕೈಗೊಂಡ ಕೊಡವಾಮೆ ಬಾಳೋ ಪಾದಯಾತ್ರೆ ನಾಲ್ಕನೇ ದಿನ ಉತ್ತರ ಕೊಡಗಿಗೆ ಆಗಮಿಸಿತು.

ಬುಧವಾರ ಬೆಳಗ್ಗೆ ವಿರಾಜಪೇಟೆಯ ಬಿಟ್ಟಂಗಾಲ ಹೆಗ್ಗಡೆ ಸಮಾಜದಿಂದ ಹೊರಟ ಪಾದಯಾತ್ರೆಯಲ್ಲಿ ಕೊಡವ ಸಂಘಟನೆಗಳ ಮುಖ್ಯಸ್ಥರು ಸೇರಿದಂತೆ ಹಲವರು ಚಪ್ಪಡ್ಕ ದೇವರನ್ನು ನಮಿಸಿದರು. ದುಡಿಕೊಟ್ಟ್ ಪಾಟ್ ನೊಂದಿಗೆ ಪಾದಯಾತ್ರಿಗಳು ಉತ್ತರ ಕೊಡಗಿಗೆ ತೆರಳಿದರು.

ಕುಟ್ಟದಿಂದ ಮಡಿಕೇರಿಗೆ 82 ಕಿ. ಮೀ.ಕೊಡವಾಮೆ ಬಾಳೊ ಪಾದಯಾತ್ರೆ, ಅಖಿಲ ಕೊಡವ ಸಮಾಜ ಆಶ್ರಯದಲ್ಲಿ ಕೊಡವ ಮತ್ತು ಕೊಡವ ಭಾಷಿಕ ಜನಾಂಗದ ಪಾದಯಾತ್ರೆ ಸಾಂಪ್ರದಾಯಿಕ ಉಡುಪಿನಲ್ಲಿ ಸಹಸ್ರಾರು ಕೊಡವರು, ಕೊಡವ ಭಾಷಿಕರು ಪಾಲ್ಗೊಂಡಿದ್ದಾರೆ.

ವಿರಾಜಪೇಟೆ ಕೊಡವ ಸಮಾಜ, ವಿರಾಜಪೇಟೆ ಪೊಮ್ಮಕ್ಕಡ ಕೂಟ ಸೇರಿದಂತೆ, ವಿವಿಧ ಸಂಘಟನೆಗಳು, ಕೊಡವ ಮುಸ್ಲಿಂ ಸಂಘಟನೆಗಳು, ಅಂಗಡಿ ಮಾಲೀಕರು ಪಾದಯಾತ್ರಿಗಳನ್ನು ಸ್ವಾಗತಿಸಿದರು. ವಾಲಗ ವಾದ್ಯಗೋಷ್ಠಿ ಕೂಡ ಗಮನ ಸೆಳೆಯಿತು.

ವಿರಾಜಪೇಟೆಯ ಅಪ್ಪಚ್ಚ ಕವಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪಾದಯಾತ್ರೆ ಮುಂದುವರೆಸಲಾಯಿತು. ಅಲ್ಲದೆ ಗಡಿಯಾರ ಕಂಬ ಬಳಿ ಗೌರವ ಸಲ್ಲಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ ಪಾದಯಾತ್ರಿಗಳನ್ನು ಸ್ವಾಗತಿಸಿದರು.

ವಿರಾಜಪೇಟೆ ತಾಲೂಕು ಆಡಳಿತ ಭವನದಲ್ಲಿರುವ ಅಮರ್ ಜವಾನ್ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯ ಪಾದಯಾತ್ರಿಗಳು ವಿರಾಜಪೇಟೆ ಕೊಡವ ಸಮಾಜದಲ್ಲಿ ಸಮಾವೇಶದಲ್ಲಿ ಕದನೂರು ಮಾರ್ಗವಾಗಿ ಭೇತ್ರಿ ತಲುಪಿದರು.

ಬೇತ್ರಿಯ ಎಂ. ಬಾಡಗ, ಮೂರ್ನಾಡು ಸುತ್ತಮುತ್ತಲಿನ ಸುಮಾರು ಐದು ಸಾವಿರ ಮಂದಿ ಪಾಲ್ಗೊಂಡಿದ್ದರು. ನಾಲ್ಕನೇ ದಿನ ಮೂರ್ನಾಡು ಸಮೀಪ ಕಿಗ್ಗಾಲುವಿನ ನೆಲ್ಲಿಮಾನಿಯಲ್ಲಿ ಪಾದಯಾತ್ರೆ ಸಮಾವೇಶಗೊಂಡಿತು.

ಕೊಡವಾಮೆ ಬಾಳೋ ಪಾದಯಾತ್ರೆಯು ಗುರುವಾರ ಬೆಳಗ್ಗೆ ಮೂರ್ನಾಡುವಿನ ನೆಲ್ಲಿಮಾನಿಯಿಂದ ತೆರಳುವ ಮೂಲಕ ಕಗ್ಗೋಡ್ಲುವಿನಲ್ಲಿ ಸಮಾವೇಶಗೊಳ್ಳಲಿದೆ. ಫೆ.7ರಂದು ಮಡಿಕೇರಿಗೆ ಆಗಮಿಸಿಲಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕೊಡವರು ಹಾಗೂ ಕೊಡವ ಭಾಷಿಕರು ಸೇರುವ ನಿರೀಕ್ಷೆಯಿದೆ.

ಕುಟ್ಟದಿಂದ ಮಡಿಕೇರಿಯವರೆಗೆ 82 ಕಿಲೋಮೀಟರ್ ನಡಿಗೆಯ ಪಾದಯಾತ್ರೆಯಾಗಿದ್ದು, ಈಗಾಗಲೇ ಪಾದಯಾತ್ರೆ 50ಕ್ಕೂ ಅಧಿಕ ಕಿ. ಮೀ. ಕ್ರಮಿಸಿದೆ.

ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ: ಕೊಡವಾಮೆ ಬಾಳೊ ಪಾದಯಾತ್ರೆಗೆ ಬೆಂಬಲಿಸಿ ಫೆ.7 ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಕುಟ್ಟದಿಂದ ಮಡಿಕೇರಿವರೆಗೆ ಆರಂಭ ವಾಗಿರುವ ಕೊಡವಾಮೆ ಬಾಳೊ ಪಾದಯಾತ್ರೆಯು ಮಡಿಕೇರಿಯಲ್ಲಿ ಸೇರುವ ಅಂತಿಮ ದಿನ ಫೆ. 7ರಂದು ದಕ್ಷಿಣ ಕೊಡಗಿನ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿದೆ.

ಶ್ರೀಮಂಗಲ -ಕುಮಟೂರುವಿನ ಜೆ. ಸಿ ಶಿಕ್ಷಣ ಸಂಸ್ಥೆ, ಟಿ. ಶೆಟ್ಟಿಗೇರಿ ರೂಟ್ಸ್ ಶಿಕ್ಷಣ ಸಂಸ್ಥೆ, ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆ, ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ, ಗೋಣಿಕೊಪ್ಪದ ಕಾಪ್ಸ್ ವಿದ್ಯಾಸಂಸ್ಥೆ ರಜೆ ಘೋಷಣೆ ಮಾಡಿದೆ.

ಕೊಡವ ಆಡಳಿತ ಮಂಡಳಿಯಲ್ಲಿರುವ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾಗೂ ಶಿಕ್ಷಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಜೆ ನೀಡಬೇಕೆಂದು ಆ ಶಾಲೆಗಳ ಮಕ್ಕಳ ಪೋಷಕರು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಈ ಮನವಿಗೆ ಮಾನ್ಯತೆ ನೀಡಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ.