ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಸಾಂಪ್ರದಾಯಿಕ ಆಚಾರ ವಿಚಾರ, ನಡ್‌ಪ್ -ಉಡ್‌ಪ್, ಪದ್ಧತಿ-ಪರಂಪರೆ ಆಟ್ ಪಾಟ್ ಬಿಂಬಿಸುವ ಸುಬ್ರಮಣ್ಯ ಕೇರಿ ಆಯೋಜನೆಯ 7ನೇ ಕೊಡವ ಅಂತರ್ ಕೇರಿ ಸಾಂಸ್ಕೃತಿಕ ಮೇಳವು ಮಡಿಕೇರಿ ಕೊಡವ ಸಮಾಜದಲ್ಲಿ ನೆರವೇರಿತು.ತಳಿಯತಕ್ಕಿ ಬೊಳ್‌ಚ, ವಾಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವ ನೆಲೆಗೆ ಬಂದು ಹಿರಿಯರಾದ ನಂದೇಟಿರ ಗೌರವ ದೀಪ ಬೆಳಗಲಾಯಿತು. ಸುಬ್ರಹ್ಮಣ್ಯಕೇರಿಯ ಹಿರಿಯರಾದ ತೇಲಪಂಡ ಸಿ.ಮಾದಪ್ಪ ದೇವ ನೆಲೆಯಲ್ಲಿ ತಪ್ಪಡಕ ಕಟ್ಟಿ ಮೇಳದ ಧ್ವಜರೋಹಣ ಮಾಡಿದರು. ಈವರೆಗೆ ಅಂತರ್ ಕೇರಿ ಮೇಳ ನಡೆಸಿದ ಕೇರಿಯವರು ಗಾಳಿಗೆ ಗುಂಡು ಹಾರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಲಾಯಿತು.
ಭಂಗಂಡೇಶ್ವರ ಕೊಡವ ಅಭಿವೃದ್ಧಿ ಸಂಘ, ದೇಚೂರು ಕೊಡವ ಕೇರಿ, ಸುದರ್ಶನ ಕೊಡವ ಕೇರಿ, ಕಾವೇರಿ ಕೊಡವ ಕೇರಿ, ರಾಣಿಪೇಟೆ ಕೊಡವ ಕೂಟ, ವಿನಾಯಕ ಕೊಡವ ಕೇರಿ, ಮುತ್ತಪ್ಪ ಕೊಡವ ಕೇರಿ, ಗಣಪತಿ ಕೊಡವ ಕೇರಿ, ಇಗ್ಗುತಪ್ಪ ಕೊಡವ ಕೇರಿ, ಎಫ್.ಎಂ.ಸಿ. ಕೊಡವ ಕೇರಿ, ಭಗವತಿ ಕೊಡವ ಕೇರಿ ಸೇರಿದಂತೆ ಮಡಿಕೇರಿಯ 11 ಕೇರಿಯ ನಡುವೆ ಬೊಳಕಾಟ್, ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ಉಮ್ಮತಾಟ್, ಬಾಳೋಪಾಟ್, ತಾಲಿಪಾಟ್, ಸಂಬಂಧ ಅಡ್‌ಕ್ ವೋ, ವಾಲಗತಾಟ್, ಪಾಟ್ ಪೈಪೋಟಿ ನಡೆಯಿತು.ಕೊಡವ ಭಾಷೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೇಲಿದೆ: ಎಸ್.ಪೊನ್ನಣ್ಣ
ಮಡಿಕೇರಿ ಕೊಡವ ಸಮಾಜದಲ್ಲಿ ನಡೆದ ೭ನೇ ಕೊಡವ ಅಂತರ್ ಕೇರಿ ಸಾಂಸ್ಕೃತಿಕ ಮೇಳದ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ದುಡಿ ಬಾಡಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಜಾನಪದ ಸಾಂಸ್ಕೃತಿಕ ಮೇಳದ ಮೂಲಕ ಕೇರಿಗಳನ್ನು ಒಟ್ಟಾಗಿಸಿ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವಾಗುತ್ತಿರುವುದು ಶ್ಲಾಘನೀಯ. ಕೊಡವ ಭಾಷೆ, ಸಂಸ್ಕೃತಿ, ಪದ್ದತಿ, ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೊಡವ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲ ರೀತಿಯ ನೆರವು ಒದಗಿಸಲು ಕಟ್ಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು.ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಮಾತನಾಡಿ, ಕೊಡವ ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ, ಪೋಷಿಸಿ ಮುನ್ನೇಡೆಸಬೇಕಾದ ಮಹತ್ವದ ಜವಾಬ್ದಾರಿ ಕೊಡವರ ಮೇಲಿದೆ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿದರು.ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡವ ಸಮಾಜ ಮಾಜಿ ಅಧ್ಯಕ್ಷ ಕೊಂಗಂಡ ದೇವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಹಿರಿಯರಾದ ಪುಲಿಯಂಡ ಮಾದಪ್ಪ, ಬಾಚೀರ ಸೀತವ್ವ, ಅಂತರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ಅಂತರಾಷ್ಟ್ರೀಯ ಅಥ್ಲೇಟ್ ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಜೆ ಕೊಡವ ಪೊಮ್ಮಕ್ಕಡ ಕೂಟ ಸೇರಿದಂತೆ ಇತರರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾಳೇಟಿರ ಅಜಿತ್ ತಂಡ ಹಾಗೂ ಚೆಕ್ಕೇರ ಪಂಚಮ್ ಬೋಪಣ್ಣ ತಂಡದಿಂದ ಕೊಡವ ಸಂಗೀತ ರಸಮಂಜರಿ ಜರುಗಿತು.