ಸಾರಾಂಶ
ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಪಡೆಯುವುದು ಕೊಡವರ ಸಂವಿಧಾನ ಬದ್ಧ ಹಕ್ಕಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 29ನೇ ವರ್ಷದ ಸಾರ್ವತ್ರಿಕ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕಲಂ 244 ರ ಅಡಿಯಲ್ಲಿ ಕೊಡವರಿಗೆ ಸ್ವಯಂ ಆಡಳಿತದ ಅಗತ್ಯವನ್ನು ತಿಳಿಸಿದರು.ಕೊಡವರು ಕೊಡವಸೀಮೆಯ ಪುರಾತನ ಬುಡಕಟ್ಟು ಜನರಾಗಿರುವುದರಿಂದ, ಸಂವಿಧಾನದ ಖಾತರಿಗಳ ಮೂಲಕ ಈ ಮಣ್ಣಿನ ರಾಜಕೀಯ ಬಲ, ನೆಲ, ಜಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ಧರಿಸುವ ಹಕ್ಕನ್ನು ಅವರು ಹೊಂದಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವರ ಅಮೋಘ ಸೇವೆಗಾಗಿ ಮತ್ತು ರಾಷ್ಟ್ರ ನಿರ್ಮಾಣದ ಅಪಾರ ಕೊಡುಗೆಗಾಗಿ ಋಣಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಕೊಡವರ ಆಕಾಂಕ್ಷೆಗಳನ್ನು ಸಿಎನ್‌ಸಿ ಸಂಘಟನೆ ಇಷ್ಟು ದಿನ ಜೀವಂತವಾಗಿರಿಸಿಕೊಂಡಿರುವುದು ಶ್ಲಾಘನೀಯ ಸಾಧನೆಯಾಗಿದೆ. ಹುಟ್ಟುವ ಪ್ರತಿಯೊಬ್ಬ ಕೊಡವ ನೈತಿಕ, ಆರ್ಥಿಕ ಮತ್ತು ದೈಹಿಕವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಹಾಗೂ ವಿಸ್ತರಿಸಬೇಕು. ಸೈದ್ಧಾಂತಿಕವಾಗಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ನಾನು ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕೊಡವರ ವಿಚಾರದಲ್ಲಿ ಮಾತ್ರ ಸಂವಿಧಾನಬದ್ಧವಾದ ಸಿಎನ್‌ಸಿಯ ಬೇಡಿಕೆಗಳಿಗೆ ಪೂರಕವಾಗಿ ಕೊಡವರ ಪರ ಇರುವುದಾಗಿ ಹರಿಪ್ರಸಾದ್ ಹೇಳಿದರು.