ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಡಿಕೆ: ವಿಚಾರಣೆ ಜೂ.9ಕ್ಕೆ ಮುಂದೂಡಿಕೆ

| Published : Mar 12 2025, 12:50 AM IST

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಡಿಕೆ: ವಿಚಾರಣೆ ಜೂ.9ಕ್ಕೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಹಿತಾಸಕ್ತಿಯ ರಿಟ್‌ ಆರ್ಜಿ ವಿಚಾರಣೆ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆಯಿತು. ಡಾ. ಸುಬ್ರಮಣಿಯನ್‌ ಸ್ವಾಮಿ ಹಾಗೂ ಅವರ ಕಾನೂನು ಸಹಾಯಕರು ವಿಚಾರಣೆ ಸಂದರ್ಭ ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾರ್ವರ್ಡ್ ವಿದ್ವಾಂಸ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಮಂಗಳವಾರ ಹೈಕೋರ್ಟ್ ನಲ್ಲಿ ನಡೆಯಿತು.

ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ವಿಭಾಗೀಯ ಪೀಠ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿತು. ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಅವರ ಕಾನೂನು ಸಹಾಯಕರು ವಿಚಾರಣೆ ಸಂದರ್ಭ ಭಾಗಿಯಾಗಿದ್ದರು.

ಸಿಎನ್‌ಸಿ ಬೇಡಿಕೆಗೆ ಆಕ್ಷೇಪ ಸಲ್ಲಿಸಿದ ಪ್ರತಿವಾದಿಗಳ ಅಹವಾಲನ್ನು ಕೂಡ ಆಲಿಸಿದ ಮುಖ್ಯ ನ್ಯಾಯಾಧೀಶರು ವಿಚಾರಣೆಯ ಮುಂದಿನ ದಿನಾಂಕವನ್ನು 2025 ಜೂ.9ಕ್ಕೆ ನಿಗದಿಪಡಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಅರ್ಜಿದಾರ ಸಂಖ್ಯೆ-2 ಆಗಿದ್ದಾರೆ. ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿವಾದಿ ಸಂಖ್ಯೆ ಕ್ರಮವಾಗಿ 1, 2 ಮತ್ತು 3 ಎಂದು ಉಲ್ಲೇಖಿಸಲಾಗಿದೆ.

ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಯು.ನಾಚಪ್ಪ ಅವರು, ಜೂ.9ರಂದು ಡಾ.ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದಲ್ಲಿ ಸಮಗ್ರ ವಾದ ಮಂಡನೆ ಮಾಡಲಿದ್ದಾರೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ ಎಂದರು.

ಕೊಡವ ಲ್ಯಾಂಡ್ ಬೇಡಿಕೆ ತಾರ್ಕಿಕ ಅಂತ್ಯ ಕಾಣುವಲ್ಲಿಯವರೆಗೆ ಹೋರಾಟ ಅಚಲ ಮತ್ತು ಮುಂದುವರಿಯಲಿ. ಕಳೆದ 35 ವರ್ಷಗಳಿಂದ ಸಿಎನ್‌ಸಿ ಸಂಘಟನೆ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ. ಕೊಡವರಿಗೆ ಕೊಡವ ಲ್ಯಾಂಡ್ ಬಿಟ್ಟರೆ ಬೇರೆ ಪ್ರದೇಶವಿಲ್ಲ. ಆದ್ದರಿಂದ ಕೊಡವ ಲ್ಯಾಂಡ್ ನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಕಾನೂನಿನ ನೆರವು ಕೋರಲಾಗಿದೆ ಎಂದು ತಿಳಿಸಿದರು.

ವಕೀಲರಾದ ಕಿರಣ್ ನಾರಾಯಣ್, ಸತ್ಯ ಸಭರ್ವಾಲ್, ಕುಮಾರಿ ಪಾಲಕ್ ಬಿಷ್ಣೋಯ್, ಶ್ರೀಕಾಂತ ಶರ್ಮಾ, ಅಭಿಷೇಕ್ ಜಿ, ಕುಮಾರಿ ಮದಿಹಾ ನಯೀಮ್, ಕುಮಾರಿ ಅನನ್ಯ ದೀಕ್ಷಿತ್, ಮಹೇಶ್ ಯಾದವ್ ಹಾಗೂ ಕುಶೇಂದ್ರ ಶಾಹಿ ಅವರು ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಹಕರಿಸಿದರು.

ವಿರಾಟ್ ಹಿಂದೂಸ್ತಾನ್ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ವಿಎಚ್‌ಎಸ್ ರಾಜ್ಯಾಧ್ಯಕ್ಷ ನಿಖುಂಜ್ ಶಾ, ರೇಖಾ ನಾಚಪ್ಪ, ಕುಮಾರಿ ಶ್ರೇಯಾ ನಾಚಪ್ಪ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಪಾಲಂದಿರ ಜೋಯಪ್ಪ, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಕಿರಿಯಮಾಡ ಶೆರಿನ್, ಕಾವಾಡಿಚಂಡ ಮೇದಪ್ಪ, ವಿಎಚ್‌ಎಸ್ ಸದಸ್ಯರಾದ ನಟರಾಜ್, ಎ.ಬಿ.ಪಾಟೀಲ್, ರವಿಶಂಕರ್ ಹಾಗೂ ಶಿವು ಈ ಸಂದರ್ಭ ಹಾಜರಿದ್ದರು.