ಕೊಡವ ಲ್ಯಾಂಡ್‌ ರಕ್ಷಣೆ ಸಮುದಾಯದ ಹೊಣೆ: ಎನ್‌.ಯು.ನಾಚಪ್ಪ

| Published : Jun 27 2025, 12:48 AM IST

ಸಾರಾಂಶ

ಕೊಡವ ಲ್ಯಾಂಡ್‌ನ ರಕ್ಷಣೆ ಆದಿಮ ಸಂಜಾತ ಏಕ ಜನಾಂಗೀಯ ಕೊಡವ ಸಮುದಾಯದ ಹೊಣೆಯಾಗಿದೆ ಎಂದು ಎನ್‌ ಯು ನಾಚಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವಲ್ಯಾಂಡ್‌ನ ರಕ್ಷಣೆ ಆದಿಮಸಂಜಾತ ಏಕ-ಜನಾಂಗೀಯ ಕೊಡವ ಸಮುದಾಯದ ಹೊಣೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದ್ದಾರೆ.

ಸಿಎನ್‌ಸಿ ವತಿಯಿಂದ ಪೊನ್ನಂಪೇಟೆಯಲ್ಲಿ ನಡೆದ 6ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಜನಗಣತಿಯೊಂದಿಗೆ ಜಾತಿವಾರು ಸಮೀಕ್ಷೆಯ ಸಂದರ್ಭ ಆದಿಮಸಂಜಾತ ಏಕ-ಜನಾಂಗೀಯ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಲಂ ಅನ್ನು ಅಳವಡಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ಕೊಡವರ ಹಾಗೂ ಕೊಡವಲ್ಯಾಂಡ್‌ನ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕೊಡವಲ್ಯಾಂಡ್ ಅನ್ನು ಸಂರಕ್ಷಿಸಲು ಸಮಸ್ತ ಕೊಡವರು ಜಾಗೃತರಾಗಬೇಕು ಮತ್ತು ಸಂವಿಧಾನದತ್ತವಾದ ಹಕ್ಕುಗಳ ಪರ ಸಂಘಟಿತರಾಗಬೇಕು. ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಲಂ ಅನ್ನು ಅಳವಡಿಸುವುದು 2026ರ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿದೆ. ಇದನ್ನು ಕೊಡವರು ಸೂಕ್ಷ್ಮವಾಗಿ ಅವಲೋಕಿಸಬೇಕು ಮತ್ತು ಈ ಬೇಡಿಕೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು.ಜುಲೈ 7ರಂದು ನಾಪೋಕ್ಲುವಿನಲ್ಲಿ ಜನಜಾಗೃತಿ:

ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಕಕ್ಕಬ್ಬೆ, ಟಿ.ಶೆಟ್ಟಿಗೇರಿ, ಬಾಳೆಲೆಯಲ್ಲಿ, ಪೊನ್ನಂಪೇಟೆ ಜನ ಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದೆ. ಮುಂದಿನ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಜುಲೈ 7ರಂದು ನಾಪೋಕ್ಲುವಿನಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.ಚೇಂದೀರ ಶೀಲಾ, ರೇಖಾ ನಾಚಪ್ಪ, ಮತ್ರಂಡ ರಾಣಿ ರಾಜೇಂದ್ರ, ಕಿಗ್ಗತ್ತನಾಡು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬೊಟ್ಟಂಗಡ ಗಿರೀಶ್, ಅಪ್ಪೆಯಂಗಡ ಮಾಲೆ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಕಾಂಡೇರ ಸುರೇಶ್, ಚೊಟ್ಟೆಯಂಡಮಾಡ ಉದಯ, ಮಾಣಿರ ಸಂಪತ್, ಆಲೆಮಾಡ ರೋಷನ್, ಚೇಂದಿರ ಅಪ್ಪಯ್ಯ ಮತ್ತಿತತರು ಹಾಜರಿದ್ದರು.