ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೊಡವ ಪ್ರೀಮಿಯರ್ ಲೀಗ್ ನ 3ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೂರ್ಗ್ ಟೈಟಾನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಎಂಟಿಬಿ ರಾಯಲ್ಸ್ ತಂಡ ರನ್ನರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಐ.ಪಿ.ಎಲ್. ಲೀಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಮೈಸೂರು ಮಕ್ಕ, ಕೊಡವ ಟ್ರೆಂಬ್ಸ್, ಕೊಡವ ರಾಯಲ್ಸ್, ಬೆಂಗಳೂರು ಬಬ್ಬಂಗಾ, ಕೂರ್ಗ್ ಟೈಟಾನ್ಸ್, ಕೊಡವು ವಾರಿಯರ್ಸ್, ಅಂಜಿನಕೇರಿ ನಾಡ್ ಕೂಟ, ನಾಪೋಕ್ಲು ನರಿಯಾ, ಬೆಂಗಳೂರು ಟಸ್ಕರ್ಸ್ಸ್, ಎಂ.ಟಿ.ಬಿ. ರಾಯಲ್ಸ್, ಕೊಡವಾಮೆ ಕಟ್ಸ್ ಮತ್ತು ಕರವಲೆ ಭಗವತಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಮೂರು ದಿನಗಳು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೊನೆಯ ಹಂತಕ್ಕೆ 4 ತಂಡಗಳು ಪದಾರ್ಪಣೆ ಮಾಡಿದವು.
ಅಂಜಿನಕೇರಿ ನಾಡ್ ಕೂಟ ತಂಡ ಮತ್ತು ಕೊಡವು ವಾರಿಯರ್ಸ್ ತಂಡದ ನಡುವೆ ನಡೆದ ಮೊದಲ ಎಲಿಮಿನೆಟ್ ಪಂದ್ಯಾಟದಲ್ಲಿ ಅಂಜಿನಕೇರಿ ನಾಡ್ ಕೂಟ ಜಯಗಳಿಸಿ ದ್ವಿತೀಯ ಎಲಿಮಿನೆಟ್ ಪಂದ್ಯಾಟಕ್ಕೆ ಅರ್ಹತೆ ಪಡೆಯಿತು. ಅರ್ಹತಾ ಸುತ್ತಿನಲ್ಲಿ ಎಂ.ಟಿ.ಬಿ. ರಾಯಲ್ಸ್ ತಂಡ ಮತ್ತು ಕೂರ್ಗ್ ಟೈಟಾನ್ಸ್ ನಡುವೆ ಸೆಣಸಾಟ ನಡೆದು ಕೂರ್ಗ್ ಟೈಟಾನ್ಸ್ ಗೆಲವು ಸಾಧಿಸಿ ಫೈನಲ್ ಗೆ ಪ್ರವೇಶ ಪಡೆಯಿತು.ದ್ವೀತಿಯ ಎಲಿಮಿನೆಟ್ ಪಂದ್ಯಾಟದಲ್ಲಿ ಅಂಜಿನಕೇರಿ ನಾಡ್ ಕೂಟ ತಂಡ ಮತ್ತು ಎಂ.ಟಿ.ಬಿ ರಾಯಲ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟು ಎಂ.ಟಿ.ಬಿ ರಾಯಲ್ಸ್ ತಂಡ ಅಂತಿಮ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿತು.
ನಗದು ಪುರಸ್ಕಾರ:ಕೂರ್ಗ್ ಟೈಟಾನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಎಂಟಿಬಿ ರಾಯಲ್ಸ್ ತಂಡ ರನ್ನರ್ಸ್ ಪ್ರಶಸ್ತಿ ಗೆದ್ದುಕೊಂಡಿತು. ವಿಜೇತ ತಂಡ ಕೂರ್ಗ್ ಟೈಟಾನ್ಸ್ ಗೆ ರು.2 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಎಂಟಿಬಿ ರಾಯಲ್ಸ್ ತಂಡಕ್ಕೆ ರು.1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಗಳಿಸಿದ ಅಂಜಿಗೆರೆ ನಾಡ್ ತಂಡಕ್ಕೆ ರು.50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ನಾಲ್ಕನೇ ಸ್ಥಾನ ಗಳಿಸಿದ ಕೊಡವ ವಾರಿಯರ್ಸ್ ತಂಡಕ್ಕೆ ರು.25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ಫೈನಲ್ ಪಂದ್ಯಾವಳಿಯಲ್ಲಿ ಪ್ರತೀಕ್ ಕೊಚ್ಚೆರ ಪಂದ್ಯ ಪುರುಷೋತ್ತಮ, ಆಟ್ರಂಗಡ ಶರತ್ ನಂಜಪ್ಪ ಸರಣಿ ಪುರುಷೋತ್ತಮ, ಕಾರ್ಯಪ್ಪ ಚಕ್ಕೇರ ಬೆಸ್ಟ್ ಬ್ಯಾಟ್ಸ್ಮನ್, ಮಾಳೇಟಿರ ನವೀನ್ ಹಾಗೂ ಕಾರ್ಯಪ್ಪ ಚೊಟ್ಟಯ್ಯಮಾಡ ಬೆಸ್ಟ್ ಬೌಲರ್, ಚೆರಿಯಪಂಡ ಶರ್ವಿನ್ ಬೆಸ್ಟ್ ಕೀಪರ್, ಮಾಳೇಟಿರ ಕರುಂಬಯ್ಯ ಬೆಸ್ಟ್ ಫೀಲ್ಡರ್, ಅಚ್ಚಪ್ಪಂಡ ಮಿಥುನ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದರು.ಕೊಡವ ಸ್ಪೋರ್ಟ್ಸ್ ಅಸೋಷಿಯೇಷನ್ ಸಂಸ್ಥೆ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ, ಕಾರ್ಯದರ್ಶಿ ಓಡಿಕಂಡ ಮಾಚಯ್ಯ, ನಿರ್ದೇಶಕರಾದ ಚೆಕ್ಕೇರ ಕಾರ್ಯಪ್ಪ, ಮುಕ್ಕಾಟೀರ ದೀಪಕ್, ಕುಟ್ಟಂಡ ರಂಜನ್ ಕಾರ್ಯಪ್ಪ ಮತ್ತಿತರರಿದ್ದರು.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಕರ್ನಾಟಕ ಸರ್ಕಾರದ ಮುಖ್ಯ ವಿದ್ಯುತ್ ನಿಯಂತ್ರಣಾಧಿಕಾರಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ತೀತಿರ ಎನ್.ಅಪ್ಪಚ್ಚು ಪಂದ್ಯಾವಳಿ ಉದ್ಘಾಟಿಸಿದರು.
ಕೊಡವ ಸ್ಪೋರ್ಟ್ಸ್ ಅಸೋಷಿಯೇಷನ್ ಸಂಸ್ಥೆಯ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಮಾತನಾಡಿ, ಈ ಬಾರಿಯ ಪಂದ್ಯಾವಳಿಯಲ್ಲಿ 200ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ಕೂಡ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಅಸೋಸಿಯೇಷನ್ ಮಾಡಲಿದೆ ಎಂದರು.ಬೆಳೆಗಾರರಾದ ಅಪ್ಪನೆರವಂಡ ನಂದ ಬೆಳ್ಯಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ಕ್ಯಾಪ್ಟನ್ ಕುಟ್ಟಂಡ ಬೋಪಣ್ಣ ಇದ್ದರು.