ಶ್ರೀಮಂಗಲ: ನಮ್ಮ ನೆಲದಲ್ಲಿ ನಾವೇ ಯಜಮಾನರಂತೆ ರಾಜರಂತೆ ಬದುಕುವುದು ಬಿಟ್ಟು ಹಣದಾಸೆಗೆ ಪಟ್ಟಣ ಸೇರಿ ಬೇರೆಯವರ ಕೈಕೆಳಗೆ ಕಷ್ಟಪಡಬೇಡಿ. ಕೊಡಗಿನ ಮಣ್ಣನ್ನು ಪ್ರೀತಿಸಿ, ಕೊಡವ ಸಂಸ್ಕೃತಿಯನ್ನು ಪಾಲನೆ ಮಾಡಬೇಕು ಎಂದು ನಿವೃತ್ತ ಕರ್ನಲ್ ವಾಟೇರಿರ ಸದಾಶಿವ ಕಿವಿಮಾತು ಹೇಳಿದರು.
ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ನಾಲ್ಕನೆ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪೋಷಕರು ಕೊಡವ ಸಂಸ್ಕೃತಿ ಹಾಗೂ ಕೊಡಗಿನ ಮಣ್ಣಿನ ಶ್ರೇಷ್ಠತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ದಾರಿ ತಪ್ಪುವಂತೆ ಮಾಡಬೇಡಿ. ಸೇನೆಗೆ ಸೇರಬೇಕಾದರೆ ಅಗತ್ಯ ಅರ್ಹತೆ ಇರಬೇಕು ಎಂದರು.ಬುಡಕಟ್ಟು ಸ್ಥಾನಮಾನಬೇಕು: ವಿದ್ಯುತ್ ನಿಗಮದ ಮುಖ್ಯ ಅಧಿಕಾರಿ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ ಕೊಡವರಿಗೆ ಬುಡಕಟ್ಟು ಸ್ಥಾನಮಾನ ಅಥವ ಪ್ರತ್ಯೇಕ ರಾಜ್ಯವಿದ್ದಿದ್ದರೆ ಇತರ ಜನಾಂಗದಂತೆ ಹೆಚ್ಚಿನ ಬೆಳವಣಿಗೆ ಸಾಧಿಸಲು ಸುಲಭ ಸಾಧ್ಯ ವಾಗುತ್ತಿತ್ತು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಈ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮವು ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶ ಎಂದರು.ದಾನಿಗಳಾದ ಕಾಳಿಮಾಡ ದಿನೇಶ್ ಕುಂಞಂಗಡ ಕ್ರಷ್ಣ ಭೀಮಯ್ಯ, ಮಂದತವ್ವ ಸಾಂಸ್ಕೃತಿಕ ತಂಡದ ಮುಖ್ಯಸ್ಥೆ ಸುಳ್ಳಿಮಾಡ ಭವಾನಿ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಕೋಟ್ರಮಡ ರಾಣಿ ದೇವಯ್ಯ ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕ ಮಾಣೀರ ದೀಪಕ್ ವಂದಿಸಿದರು. ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲಂಡ ಸತೀಶ್,ನಿರ್ದೇಶಕರಾದ ತಡಿಯಂಗಡ ಶಮ್ಮಿ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.