ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.ದೇವಟ್ ಪರಂಬ್ ನಲ್ಲಿ ಸಿಎನ್‌ಸಿ ವತಿಯಿಂದ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ ಅವರು ಪುಷ್ಪ ನಮನದ ಮೂಲಕ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು. ಕೊಡವಲ್ಯಾಂಡ್ ಮತ್ತು ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪೂರ್ವಜರಿಂದ ಆಶೀರ್ವಾದ ಬೇಡಿದೆವು. ಸಿಎನ್‌ಸಿ ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನರುಚ್ಚರಿಸುತ್ತಿದ್ದು, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆ ಪಿತೂರಿಯಿಂದ ನಡೆದ ಕೊಡವರ ರಾಜಕೀಯ ಹತ್ಯೆಗಳನ್ನು ಗುರುತಿಸಬೇಕು ಎಂದರು. ಸಂವಿಧಾನದ 49 ನೇ ವಿಧಿ ಮತ್ತು ಯುನೆಸ್ಕೋದ 1964 ರ ವೆನಿಸ್ ಚಾರ್ಟರ್ ಅಡಿಯಲ್ಲಿ ಈ ದುರಂತಗಳನ್ನು ಅಂತಾರಾಷ್ಟ್ರೀಯ ಹೊಲೊಕಾಸ್ಟ್ ಸ್ಮಾರಕ, ವಿಶ್ವಸಂಸ್ಥೆಯ ಅಂತಾರಾಷ್ಟ್ರಿಯ ಹೊಲೊಕಾಸ್ಟ್ ಸ್ಮರಣಾರ್ಥ ಪಟ್ಟಿ ಮತ್ತು ಉಲುಗುಲಿ, ಮುಳ್ಳುಸೋಗೆ ಹಾಗೂ ಲಕ್ಡಿಕೋಟೆಯಲ್ಲಿರುವ ಕೊಡವ ಯುದ್ಧ ಕುರುಹುಗಳನ್ನು ಅಂತಾರಾಷ್ಟ್ರೀಯ ಯುದ್ಧ ಸ್ಮಾರಕಗಳಲ್ಲಿ ಸೇರಿಸುವ ಮೂಲಕ ಸ್ಮರಿಸಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವರು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯ ವನ್ನು ಶಾಸನಬದ್ಧವಾಗಿ ರಕ್ಷಿಸಬೇಕು. ಈಶಾನ್ಯ ಭಾರತ, ಲೆಹ್, ಲಡಾಖ್ ಮತ್ತು ಗೂರ್ಖಾಲ್ಯಾಂಡ್ ಮಾದರಿಯಲ್ಲಿ ಕೊಡವಲ್ಯಾಂಡ್ ನ್ನು ಸಂವಿಧಾನದ 5 ನೇ ಮತ್ತು 6 ನೇ ಅನುಸೂಚಿಗಳೊಂದಿಗೆ 244 ನೇ ವಿಧಿ ಮತ್ತು 371 ನೇ ವಿಧಿಯ ಅಡಿಯಲ್ಲಿ ಸ್ವಯಂ ಆಡಳಿತದ ಭೂ-ರಾಜಕೀಯ ಸ್ವಾಯತ್ತ ಪ್ರದೇಶವಾಗಿ ತರಬೇಕು. ಕೊಡವ ಬುಡಕಟ್ಟು ಸಮುದಾಯವನ್ನು ಭಾರತೀಯ ಸಂವಿಧಾನದ ಅನುಸೂಚಿ ಮತ್ತು ಆದಿಮಸಂಜಾತ ಜನರ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ ಘೋಷಣೆಯಡಿಯಲ್ಲಿ ಆದಿಮಸಂಜಾತ ಏಕ-ಬುಡಕಟ್ಟು ಪ್ರಕೃತಿ ಆರಾಧಕ (ಅನಿಮಿಸ್ಟಿಕ್ ) ಗುಂಪಾಗಿ ಗುರುತಿಸಬೇಕೆಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.ಮಂದಪಂಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪಂಡ ಸೂರಜ್, ಮಂಗೇರಿರ ಜಗದೀಶ್ ಹಾಗೂ ಕೊಟ್ಟುಕತ್ತೀರ ಬಾಬಿ ಪಳಂಗಪ್ಪ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.