ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವಾಮೆ ಹಾಗೂ ಕೊಡವ ಸಂಸ್ಕೃತಿಯ ವಿರುದ್ಧ ನಿರಂತರ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆ ಸೇರಿದಂತೆ ಕೊಡವ ಭಾಷಿಕ ಸಮುದಾಯಗಳು ಕುಟ್ಟದಿಂದ ಮಡಿಕೇರಿ ವರೆಗೆ ಕೈಗೊಂಡ ‘ಕೊಡವಾಮೆ ಬಾಳೋ’ ಪಾದಯಾತ್ರೆಯ ಎರಡನೇ ದಿನ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಪೊನ್ನಂಪೇಟೆ ಕೊಡವ ಸಮಾಜ, ತಳಿಯತಕ್ಕಿ ಬೊಳಕ್ ಹಾಗೂ ದುಡಿ ಕೊಟ್ಟ್ ಪಾಟ್‌ನೊಂದಿಗೆ ಸ್ವಾಗತಿಸುವ ಮೂಲಕ ಎರಡನೇ ದಿನದ ಪಾದಯಾತ್ರೆ ಸಂಪನ್ನಗೊಂಡಿತು.ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಮಾಜಿ ಸೈನಿಕರು ನಿರ್ಮಿಸಿದ ಅಮರ್ ಜವಾನ್ ಪುತ್ಥಳಿಗೆ ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಮಾಲಾರ್ಪಣೆ ಮಾಡಿದ ನಂತರ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಪ್ರಾರ್ಥನೆ ಸಲ್ಲಿಸಿ ನೆಲ್ಲಕ್ಕಿಗೆ ಅಕ್ಕಿ ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ನಂತರ ತಳಿಯಕ್ಕಿ ಬೊಳಕ್‌ನೊಂದಿಗೆ ಶಿಸ್ತುಬದ್ಧವಾಗಿ ಹೊರಟ ಪಾದಯಾತ್ರೆ, ನಂತರ ಒಂಟಿಯಂಗಡಿಯ ಇತಿಹಾಸ ಪ್ರಸಿದ್ಧ ಪೆರುಮಾಳ್ ಪಟ್ಟಿ ದೇವನೆಲೆಯಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಶುಭಕೋರಲಾಯಿತು.ಸಂಭ್ರಮ ಮಹಿಳಾ ಸಂಘ ಸೇರಿದಂತೆ ಮಚ್ಚಮಾಡ ಕುಟುಂಬ, ತುಪ್ಪನಾಣಿ ಭಗವತಿ ದೇವಸ್ಥಾನ, ಹೈಸೊಡ್ಲೂರ್ ಗ್ರಾಮಸ್ಥರು, ಸ್ವಾಗತಿಸಿ ತಂಪು ಪಾನಿಯ, ಲಘು ಫಲಾಹಾರ ನೀಡಿದರೆ, ಹುದಿಕೇರಿ ಮತ್ತು ಕೋಣಂಗೇರಿ ಗ್ರಾಮಸ್ಥರು ಸ್ವಾಗತಿಸಿ, ಅಲ್ಲಿನ ಕೊಡವ ಸಮಾಜದಲ್ಲಿ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು. ಹುದಿಕೇರಿ 7ನೇ ಮೈಲ್‌ನಲ್ಲಿ ತೀತೀರ ಕುಟುಂಬ ಎಲ್ಲರಿಗೂ ಐಸ್ ಕ್ರೀಮ್ ನೀಡುವ ಮೂಲಕ ಬಿಸಿಲ ಬೇಗೆಯಿಂದ ತತ್ತರಿಸಿದ ಮಂದಿಗೆ ತಂಪು ನೀಡಿದರು.
ಬೇಗೂರ್ ಕೊಲ್ಲಿಯ ನಂತರ ನಡಿಕೇರಿಯಲ್ಲಿ ಗ್ರಾಮಸ್ಥರು ಸ್ವಾಗತಿಸುವ ಮೂಲಕ ಸಿಹಿ ನೀಡಿದರೆ, ಬೇಗೂರುವಿನ ಪೂಳೇಮಾಡ್ ಈಶ್ವರ ದೇವಸ್ಥಾನ ದ್ವಾರದಲ್ಲಿ ಬೇಗೂರು ಗ್ರಾಮಸ್ಥರು ಬರಮಾಡಿಕೊಂಡು ತಂಪು ಪಾನೀಯ ಹಾಗೂ ಸಿಹಿ ನೀಡಿದರು. ಬಳಿಕ ಮಾಪಳೆ ತೋಡಿಗೆ ಆಗಮಿಸುತ್ತಿದ್ದಂತೆ ಕೊಡವ ಮುಸ್ಲಿಮ್ ಜನಾಂಗ ಹಾಗೂ ಆಲೀರ ಕುಟುಂಬ ಅದ್ದೂರಿಯ ಸ್ವಾಗತದೊಂದಿಗೆ ತಂಪು ಪಾನೀಯ, ಕಾಫಿ, ಟೀ ಸೇರಿದಂತೆ ಬಿಸ್ಕೆಟ್ ಹಾಗೂ ಸಿಹಿ ತಿನಿಸುಗಳನ್ನು ನೀಡುವ ಮೂಲಕ ಕೊಡವ ಜನಾಂಗ ಹಿರಿಯಣ್ಣ ಎಂಬ ಸಂದೇಶವನ್ನು ಸಾರಿದರು.ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆ ಹಾಗೂ ಸಮಾಜಗಳ ಅದ್ದೂರಿಯ ಸ್ವಾಗತದೊಂದಿಗೆ ನಡೆದ ಎರಡನೇ ದಿನದ ಪಾದಯಾತ್ರೆಯನ್ನು ಪೊನ್ನಂಪೇಟೆ ಕೊಡವ ಸಮಾಜ ಅದ್ದೂರಿಯ ಸ್ವಾಗತ ನೀಡುವ ಮೂಲಕ ಕೊನೆಗೊಂಡಿತು. ಮಂಗಳವಾರದ ಪಾದಯಾತ್ರೆ ಸರಿಯಾಗಿ ಬೆಳಗ್ಗೆ 9.30ಕ್ಕೆ ಪೊನ್ನಂಪೇಟೆ ಕೊಡವ ಸಮಾಜದಿಂದ ಪ್ರಾರಂಭಗೊಂಡು ಗೋಣಿಕೊಪ್ಪ ಮೂಲಕ ಹಾದು ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಕೊನೆಗೊಳ್ಳಲಿದೆ.--------------------ವೀಲ್ ಚೇರ್‌ನಲ್ಲಿ ಪಾದಯಾತ್ರೆಗೆ ಆಗಮಿಸಿದ ವೃದ್ಧೆ
ವೀಲ್ ಚೇರ್‌ನಲ್ಲಿ ಆಗಮಿಸಿ ಅಭಿಮಾನದಿಂದ ಕೊಡವಾಮೆ ಬಾಳೊ ಪಾದಯಾತ್ರೆಯಲ್ಲಿ ಹಿರಿಯ ಮಹಿಳೆಯೋರ್ವರು ಭಾಗವಹಿಸಿದ್ದರು.ಹೈಸೊಡ್ಲೂರು ಗ್ರಾಮದ ಬಯವಂಡ ಸರಸ್ವತಿ ಪೂವಯ್ಯ (86) ಎಂಬವರು ನಡೆಯಲು ಆಗದ ಕಾರಣ ವೀಲ್ ಚೇರ್‌ನಲ್ಲಿ ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ತಾವಳಗೇರಿ ಮಚ್ಚಮಾಡ ಐನ್ ಮನೆಯಲ್ಲಿ ಮಚ್ಚಮಾಡ ಕುಟುಂಬಸ್ಥರು ಪಾದಯಾತ್ರೆಯನ್ನು ಸ್ವಾಗತಿಸಿ ಉಪಚರಿಸಿದರು. ನಂತರ ಐತಿಹಾಸಿಕ ತಾವಳಗೇರಿಯ ಪೆರುಮಾಳ್ ಮಂದ್‌ನಲ್ಲಿರುವ ಪೆರುಮಾಳ್ ಅಚ್ಚ ನಡೆಯಲ್ಲಿ ಪಾದಯಾತ್ರೆ ಯಶಸ್ವಿಗೆ ಹಾಗೂ ಪಾದಯಾತ್ರೆ ಸಂದರ್ಭ ತೊಟ್ಟಿರುವ ಸಂಕಲ್ಪವನ್ನು ಯಶಸ್ವಿಗೊಳಿಸುವಂತೆ ಪ್ರಾರ್ಥಿಸಲಾಯಿತು.ಪಾದಯಾತ್ರೆಯಲ್ಲಿ ಟಿ-ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್‌ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.