ಮಲ್ಪೆ: ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ನಡೆಯುತ್ತಿರುವ ಮಹಾ ರುದ್ರಯಾಗದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಂಜೆ ಭವ್ಯ ಗಂಗಾರತಿ ಕಾರ್ಯಕ್ರಮ ನೆರವೇರಿತು.ಕಾಶಿಯಿಂದ ಆಗಮಿಸಿದ್ದ ಪುರೋಹಿತರು ವೇದಘೋಷ ಹಾಗೂ ಮಂತ್ರೋಚ್ಚಾರಣೆಯೊಂದಿಗೆ ಗಂಗಾರತಿ ನೆರವೇರಿಸಿದರು. ಮತ್ಸ್ಯಸಂಪತ್ತು ವೃದ್ಧಿಗಾಗಿ ಸಮುದ್ರ ರಾಜನಿಗೆ ವಿಶೇಷ ಆರತಿ ಮಾಡಲಾಯಿತು. ಸಮುದ್ರ ತೀರದಲ್ಲಿ ಆಕರ್ಷಕ ದೀಪಗಳೊಂದಿಗೆ ನಡೆದ ಗಂಗಾರತಿಯು ಭಕ್ತರ ಗಮನ ಸೆಳೆಯಿತು.

ಮಹಾರುದ್ರ ಯಾಗದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ನಡೆದ ಗಂಗಾರತಿ ವಿಶೇಷ ಆಕರ್ಷಣೆಯಾಯಿತು. ಕಾರ್ಯಕ್ರಮದ ಸಂದರ್ಭ ಭಕ್ತರು ದೀಪಾರಾಧನೆ ಸಲ್ಲಿಸಿ ದೇವರ ಕೃಪೆಗೆ ಪ್ರಾರ್ಥಿಸಿದರು. ಈ ಸಂದರ್ಭ ಮಹಾರುದ್ರ ಯಾಗದ ಸೇವಾಕರ್ತರಾದ ಪ್ರಸಾದ್ ರಾಜ್ ಕಾಂಚನ್, ಯಾಗ ಸಮಿತಿಯ ಮಹಾ ಸಂಚಾಲಕರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ತಾರಾನಾಥ ಪೂಜಾರಿ, ತೋಟದ ಮನೆ ದಿವಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.