ವಿಜೃಂಭಣೆಯ ಕೊಡೇಕಲ್ ಬಸವೇಶ್ವರ ಜಾತ್ರಾ ಮಹೋತ್ಸವ

| Published : Apr 15 2025, 12:52 AM IST

ಸಾರಾಂಶ

ಸರ್ವಧರ್ಮ, ಸಮನ್ವಯ ಸಂಕೇತದ ಕೊಡೇಕಲ್ ಕಾಲಜ್ಞಾನಿ ಶ್ರೀ ಬಸವೇಶ್ವರರ ಜಾತ್ರೆಯು ದೇವಸ್ಥಾನದ ಅಪ್ಪನಕಟ್ಟೆಯಲ್ಲಿ ಪೂಜ್ಯ ವೃಷಬೇಂದ್ರ ಸ್ವಾಮೀಜಿ ಅಪ್ಪಣೆ ಮೇರೆಗೆ ನಗಾರಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಸರ್ವಧರ್ಮ, ಸಮನ್ವಯ ಸಂಕೇತದ ಕೊಡೇಕಲ್ ಕಾಲಜ್ಞಾನಿ ಶ್ರೀ ಬಸವೇಶ್ವರರ ಜಾತ್ರೆಯು ದೇವಸ್ಥಾನದ ಅಪ್ಪನಕಟ್ಟೆಯಲ್ಲಿ ಪೂಜ್ಯ ವೃಷಬೇಂದ್ರ ಸ್ವಾಮೀಜಿ ಅಪ್ಪಣೆ ಮೇರೆಗೆ ನಗಾರಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಸಂಜೆ ಪಲ್ಲಕ್ಕಿಗಳ ಕಳಸಹಾರೋಹಣ, ಅಷ್ಟವಿಧಾರ್ಚನೆಯೊಂದಿಗೆ ಪೂಜೆ, ಭಜನಾಸೇವೆ ನೇರವೇರಿ ಸೋಮವಾರ ವೈಭವದ ಜೋಡು ಪಲ್ಲಕ್ಕಿಗಳ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿತು. ಕಾಲಜ್ಞಾನಿ ಬಸವೇಶ್ವರ ಮಂದಿರದಿಂದ ಐಕ್ಯ ಸ್ಥಳ ಮಂದಿರ (ಪ್ಯಾಟಿ ಗುಡಿ)ದವರೆಗೆ ಜೋಡು ಪಲ್ಲಕ್ಕಿಗಳ ಉತ್ಸವದ ಮೆರವಣಿಗೆಯೊಂದಿಗೆ ಕೊಡೇಕಲ್ ಬಸವ ಪರಂಪರೆಯ ಮಹಲಿನ ಮಠದ ಪೂಜ್ಯ ವೃಷಬೇಂದ್ರ ಶ್ರೀಗಳ ಸಾನಿಧ್ಯದಲ್ಲಿ, ರಾಜಾ ಮನೆತನದ ರಾಜಾ ಜಿತೇಂದ್ರ ನಾಯಕ ಜಾಹಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಅವರ ಸಮ್ಮುಖದಲ್ಲಿ ಹಾಗೂ ಜನಪ್ರತಿನಿಧಿಗಳ, ಗಣ್ಯ ಮಾನ್ಯರು, ತಾಲುಕಾ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ, ಹಾಗೂ ಗ್ರಾಮಾಡಳಿತ ಅಧಿಕಾರಿಗಳೊಂದಿಗೆ ಗ್ರಾ.ಪಂ. ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.

ಜಾತ್ರಾ ಪಲ್ಲಕ್ಕಿ ಉತ್ಸವದಲ್ಲಿ ಬಸವ ಪರಂಪರೆಯ ಗುರುಗಳು, ಕೈಯಲ್ಲಿ ಕಾಲಜ್ಞಾನ ವಚನ ಗ್ರಂಥ ಮಾಲಿಕೆ ಹಿಡಿದು ಹಿಮ್ಮುಖವಾಗಿ ಪಠಿಸುತ್ತ ಸಾಗುತ್ತಿದ್ದಂತೆ, ವಚನಗಳ ಸಾಲಿನ ಧ್ವನಿಗೆ ಅನೇಕರು ವಿಚಿತ್ರವಾಗಿ ಕೂಗುತ್ತಾ, ನರ್ತನ ಮಾಡುತ್ತಿದ್ದರು. ನಂತರದಲ್ಲಿ ಹಿರೇ ಒಡೆಯನ ಸ್ಥಾನಕ್ಕೆ ಬರುತ್ತಿದ್ದಂತೆ ವಿಚಿತ್ರ ವರ್ತನೆ ಮಾಡುತ್ತಿದ್ದವರು ಸ್ತಬ್ಧರಾಗುತ್ತಿದ್ದಂತಹ ನಂಬಿಕೆಯ ವಿಶೇಷ ಗಮನ ಸೆಳೆಯಿತು. ಮಂಗಳವಾರದಿಂದ ಏ.18 ರ ಶುಕ್ರವಾರದವರೆಗೆ ದನಗಳ ಜಾತ್ರೆ ನಡೆಯಲಿದೆ.