ರೈತ ವಿರೋಧಿ ಬಜೆಟ್‌: ಕೋಡಿಹಳ್ಳಿ ಚಂದ್ರಶೇಖರ

| Published : Mar 07 2025, 11:47 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಏನೂ ಲಾಭ ಇಲ್ಲ. ಕೃಷಿ ಮತ್ತು ರೈತರ ಅಭಿವೃದ್ಧಿಗೆ ವಿರೋಧಿ ಬಜೆಟ್ ಇದಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ಹೊಸಪೇಟೆಯಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನ, ಜನರ ನಡುವೆ ಜನತಾ ಪ್ರಣಾಳಿಕೆ ಕುರಿತು ಸಮಾವೇಶದಲ್ಲಿ ಅವರು ಮಾತನಾಡಿದರು.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಏನೂ ಲಾಭ ಇಲ್ಲ. ಕೃಷಿ ಮತ್ತು ರೈತರ ಅಭಿವೃದ್ಧಿಗೆ ವಿರೋಧಿ ಬಜೆಟ್ ಇದಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ನವ ಕರ್ನಾಟಕ ನಿರ್ಮಾಣ ಆಂದೋಲನ, ಜನರ ನಡುವೆ ಜನತಾ ಪ್ರಣಾಳಿಕೆ ಕುರಿತು ಸಮಾವೇಶದಲ್ಲಿ ಮಾತನಾಡಿದ ಅವರು, ರೈತರು ಬಳಸುವ ಉಪಕರಣಗಳಿಗೆ ಸಬ್ಸಿಡಿ ಕೊಡುವ ಸಲುವಾಗಿ ಮತ್ತು ಒಟ್ಟಾರೆ ಕಂಪನಿಗಳಿಗೆ ಲಾಭ ನೀಡುವ ಒಳಸಂಚಿನ ಬಜೆಟ್ ಇದಾಗಿದೆ. ಸರ್ಕಾರ ಮೊದಲು ನಾಗರಿಕ ಸಮಾಜ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ರೈತರು ಆರ್ಥಿಕವಾಗಿ ಬೆಳೆದಿಲ್ಲ. ಸರ್ಕಾರ ಕನಿಷ್ಠ ಬೆಲೆ ನಿಗದಿಯನ್ನು ಶಾಸನಬದ್ಧವಾಗಿ ಜಾರಿಗೆ ತರಬೇಕು. ಈ ಹಿಂದೆ ಸ್ವಾಮಿನಾಥನ್‌ ಆಯೋಗ ನೀಡಿರುವ ವರದಿ ಜಾರಿಗೆ ಬಂದರೆ ರೈತರಿಗೆ ಕನಿಷ್ಠ ನ್ಯಾಯ ಸಿಗುತ್ತದೆ. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ರೈತರಿಗೆ ಎಳ್ಳಷ್ಟು ಲಾಭ ಇಲ್ಲ ಎಂದರು.

ಈ ಬಜೆಟ್ ದುಡಿಯುವ ಜನಕ್ಕೆ ಯಾವುದೇ ನ್ಯಾಯ ಕೊಡಿಸಿಲ್ಲ. ಬಡತನ ನಿರಂತರ ಮುಂದುವರಿಸುವ ಕುತಂತ್ರ ಇದಾಗಿದೆ. ನಮ್ಮ ಹಕ್ಕುಗಳನ್ನು ಪಡೆಯಲು ರಾಜ್ಯದಲ್ಲಿ ಪರ್ಯಾಯ ಪಕ್ಷದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷ ಕಟ್ಟಬೇಕು ಎನ್ನುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಬಳಿಕ ನವ ಕರ್ನಾಟಕ ನಿರ್ಮಾಣ ಸಮಿತಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಮುಖಂಡ ಗೋಪಿನಾಥ್ ಮಾತನಾಡಿ, ಯಾವ ಸರ್ಕಾರ ಬಂದರೂ ರೈತರಿಗೆ ಕಷ್ಟ ತಪ್ಪಿದ್ದಲ್ಲ. ಪಕ್ಷಗಳು ಚುನಾವಣೆ ಸಮಯದಲ್ಲಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತವೆ. ಅದರಲ್ಲಿ ಬರೀ ಸುಳ್ಳು ಇದ್ದು ಜನರ ಮತ ಸೆಳೆಯಲು ತಂತ್ರಗಾರಿಕೆ ರೂಪಿಸಲಾಗುತ್ತದೆ. ಸರ್ಕಾರ ರಚನೆಯಾದ ಆನಂತರ ಇವೆಲ್ಲವನ್ನೂ ಮರೆತು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳು ತೆರೆಯಲು ಪ್ರೇರೇಪಿಸುತ್ತಾರೆ ಎಂದು ದೂರಿದರು.

ಮುಖಂಡರಾದ ಪುಟ್ಟರಾಜು, ಹನುಮಂತಪ್ಪ ಹೊಳೆಯೂರು, ಬಸವರಾಜ, ಖಾಜಾ ಹುಸೇನ್ ನಿಯಾಜಿ, ಜಹಿರುದ್ದೀನ್, ಟಿ. ನಾಗರಾಜ, ಎನ್. ಜಡೆಪ್ಪ, ಸಣ್ಣಕ್ಕಿ ರುದ್ರಪ್ಪ, ಶ್ರೀನಿವಾಸ, ವಿ.ಟಿ. ನಾಗರಾಜ, ತಿಮ್ಮಪ್ಪ, ರಂಗಪ್ಪ, ಹನುಮಂತಪ್ಪ, ಸುಮಲತಾ, ಮಲ್ಲಿಕಾರ್ಜುನ, ಎ. ಚಿದಾನಂದ, ಸಾಮ್ರಾಟ್, ಪಿ. ಮೋಹನ್ ಮತ್ತಿತರರಿದ್ದರು.