ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸೇವಾ ಮನೋಭಾವ ನಮ್ಮೆಲ್ಲರ ಬದುಕಿಗೆ ಅವರ್ಣನೀಯ ಸಂತಸದ ಬೆಳಕು ಒದಗಿಸುವುದರಿಂದ ಮತ್ತು ಮಾನವನ ಜೀವನದಲ್ಲಿ ಸೇವೆ ಭಗವಂತನ ಪ್ರೀತಿಗೆ ಪಾತ್ರವಾಗುವುದರಿಂದ ಸೇವೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕೆಂದು ನೆದರ್ ಲ್ಯಾಂಡ್ ದೇಶದ ಉದ್ಯಮಿ ಹಾಗೂ ಸಾಮಾಜಿಕ ಸೇವಾ ಕಾರ್ಯಕರ್ತ ಅರ್ಜೆನ್ ಅಲಿಯಾಸ್ ಅರ್ಜುನ್ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಕೊಡಿಂಬಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಎನ್ಎಸ್ಎಸ್ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಆರ್ಥಿಕವಾಗಿ ಶ್ರೀಮಂತರಲ್ಲ. ನಾವು ಒಬ್ಬರೇ ಸೇವೆ ಮಾಡಿದರೆ ದೇಶೋದ್ಧಾರವಾಗುವುದೇ? ಎಂಬೆಲ್ಲಾ ಶಿಬಿರಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಭಾಗದಲ್ಲಿ ಹಿಮಚ್ಚಾದಿತ ಬೆಟ್ಟಗಳಿಲ್ಲ. ಆದರೆ ನೆದರ್ ಲ್ಯಾಂಡ್ ನಂತಹ ದೇಶಗಳಲ್ಲಿ ಹಿಮಚ್ಚಾದಿತ ಬೆಟ್ಟಗಳು ಹಲವಿದೆ. ಅಲ್ಲಿ ಬೆಟ್ಟದ ಮೇಲೇರಿ ಅಂಗೈಯಲ್ಲಿ ಒಂದಷ್ಟು ಮಂಜು ತೆಗೆದುಕೊಂಡು ಕೆಳಕ್ಕೆ ಎಸೆದರೆ ಅದು ಉರುಳಿಕೊಂಡು ಉರುಳಿಕೊಂಡು ನೆಲ ತಲುಪುವಾಗ ಹೆಬ್ಬಂಡೆಯಾಗಿ ಮಾರ್ಪಾಡಾಗುತ್ತಿರುತ್ತದೆ. ಅಂತೆಯೇ ನಮ್ಮ ಸಣ್ಣ ಸಣ್ಣ ಸೇವಾ ಕಾರ್ಯಗಳೂ ಕೂಡಾ ದೊಡ್ಡ ಫಲಿತಾಂಶಕ್ಕೆ ಕಾರಣವಾಗಬಲ್ಲದು ಎಂದರು.ಎನ್ಎಸ್‌ಎಸ್ ಮತ್ತು ನಾಯಕತ್ವ ಗುಣಗಳ ಬಗ್ಗೆ ಒಂದಷ್ಟು ಚಟುವಟಿಕೆಗಳೊಂದಿಗೆ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ನಂದೀಶ್ ವೈ.ಡಿ., ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಅರಿತುಕೊಂಡರೆ ಸಾಲದು, ಅವುಗಳನ್ನು ನಾವು ಆಚರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ದ.ಕ.ಜಿ.ಪ ಪಂ.ಸ.ಪ್ರಾ ಶಾಲೆ ಕೋಡಿಂಬಾಡಿಯ ಸಹ ಶಿಕ್ಷಕಿ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಸಿಯಾ, ಕೋಡಿಂಬಾಡಿ ಅಂಗನವಾಡಿ ಕಾರ್ಯಕರ್ತೆ ಸುಮಲತಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿರಾಜ ಎಸ್, ಶಿಬಿರಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಕೇಶವ ಕುಮಾರ ಬಿ ಹಾಜರಿದ್ದರು. ಶಿಬಿರಾರ್ಥಿ ದುರ್ಗಾ ಪ್ರಸಾದ್ ಸ್ವಾಗತಿಸಿದರು. ರಮ್ಯಾ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಪ್ರದೀಪ್ ವಂದಿಸಿದರು ಮತ್ತು ಪದ್ಮಶ್ರೀ ನಿರೂಪಿಸಿದರು.