ಸಾರಾಂಶ
ಹೈಕೋರ್ಟ್ ಹಿರಿಯ ವಕೀಲ ಮತ್ತು ಸ್ಥಳೀಯರೂ ಆದ ಎಚ್.ಎಸ್. ಚಂದ್ರಮೌಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಅಶೋಕ ಆಲೂರ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಗೀತ ತ್ಯಾಗರಾಜ್ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಸಮೀಪದ ಕೊಡ್ಲಿಪೇಟೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಮತ್ತು ಗಂಗಪೂಜೆಯನ್ನು ಗುರುವಾರ ನೆರವೇರಿಸಲಾಯಿತು.ಕೊಡಗಿನ ಕುಲದೇವತೆ ಕಾವೇರಿ ಮಾತೆ ತಲಕಾವೇರಿಯಲ್ಲಿ ತೀರ್ಥೊದ್ಭವಾದ ಸಮಯದಲ್ಲೆ ನಂದಿಪುರ ಕೆರೆಗೆ ಬಾಗಿನ ಅರ್ಪಿಸಿ ಗಂಗಾಪೂಜೆ ಮತ್ತು ಗಂಗಾರತಿ ಮಾಡಲಾಯಿತು.
ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನದ ಅರ್ಚಕರ ತಂಡ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮಂತ್ರ ಘೋಷಣೆಯೊಂದಿಗೆ ಕೆರೆಗೆ ಬಾಗಿನ ಅರ್ಪಣೆ ಮಾಡಿ, ಗಂಗಾಪೂಜೆ ಗಂಗಾರತಿ ಮಾಡಲಾಯಿತು.ಕೊಡ್ಲಿಪೇಟೆ ನಂದಿಪುರ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ 4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಉದ್ಯಾನವನ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಕೊಡ್ಲಿಪೇಟೆ ಭಾಗದಲ್ಲಿ ಇದು ಪುರಾತನ ಕೆರೆಯಾಗಿದ್ದು, ಇದನ್ನೇ ನಂಬಿ ರೈತರು ಕೃಷಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ತೀರ್ಥೋದ್ಭವ ದಿನದಂದು ಪ್ರಥಮ ಬಾರಿಗೆ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಮತ್ತು ಗಂಗಾರತಿ ಪೂಜೆ ನೆರವೇರಿಸಲಾಗಿದೆ.
ಹೈಕೋರ್ಟ್ ಹಿರಿಯ ವಕೀಲ ಮತ್ತು ಸ್ಥಳೀಯರೂ ಆದ ಎಚ್.ಎಸ್. ಚಂದ್ರಮೌಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಅಶೋಕ ಆಲೂರ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಗೀತ ತ್ಯಾಗರಾಜ್ ಉಪಸ್ಥಿತರಿದ್ದರು. ಮಹಿಳೆಯರಿಂದ ಮೆರವಣಿಗೆ: ಈ ಸಂದರ್ಭದಲ್ಲಿ ಕೊಡ್ಲಿಪೇಟೆ ಕಡೆಪೇಟೆ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆವರೆಗೆ ಗಂಗಾ ವೀರಶೈವ ಸಮಾಜ ಮತ್ತು ಧರ್ಮಸ್ಥಳ ಸಂಘದ ಮಹಿಳೆಯರು ಪೂರ್ಣಕಂಭ ಹೊತ್ತು ನಂದಿಧ್ವಜದೊಂದಿಗೆ ಕಾಲ್ನಡಿಗೆ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ಮಹಿಳೆಯರು ಹಸಿರು ಬಣ್ಣದ ಸೀರೆ ಧರಿಸಿ ಮೆರವಣಿಗೆಯ ಸೊಬಗು ಹೆಚ್ಚಿಸಿದರು. ಈ ಸಂದರ್ಭ ಕೊಡ್ಲಿಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಅಪ್ಸರಿ ಬೇಗಂ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದೇಶ್, ಗಂಗಾ ವೀರಶೈವ ಸಮೀತಿ ಅಧ್ಯಕ್ಷೆ ಮಂಜುಳಾ ಸುರೇಶ್, ಧರ್ಮಸ್ಥಳ ಸಂಘದ ಪಂಕಜಾ, ಪ್ರಮುಖರಾದ ಡಾ. ಉದಯ್‍ಕುಮಾರ್, ಕಾಂತರಾಜು, ಶರತ್ ಶೇಖರ್, ಎಚ್.ಸಿ. ಯತೀಶ್, ಜಿ.ಆರ್. ಸುಬ್ರಮಣ್ಯ, ಕೆ.ಸಿ. ಪ್ರಸನ್ನ, ಶಿಕ್ಷಕ ಅಬ್ದುಲ್ ರಬ್, ವಕೀಲ ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.