ಕೋಲಾರ: ಏರ್‌ಬಸ್‌, ಟಾಟಾಹೆಲಿಕಾಪ್ಟರ್ ಘಟಕ ಸ್ಥಾಪನೆ

| Published : May 27 2025, 11:49 PM IST

ಕೋಲಾರ: ಏರ್‌ಬಸ್‌, ಟಾಟಾಹೆಲಿಕಾಪ್ಟರ್ ಘಟಕ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ.

ನವದೆಹಲಿ: ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ. ಬೆಂಗಳೂರಿನಿಂದ ಕೇವಲ 2 ತಾಸು ದೂರದಲ್ಲಿರುವ, ಕೋಲಾರದ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ತಲೆಎತ್ತಲಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ಅತ್ಯಂತ ಪ್ರತಿಷ್ಠಿತವಾಗಿರುವ ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳು ಕರ್ನಾಟಕಕ್ಕೆ ತುರುಸಿನ ಪೈಪೋಟಿ ನೀಡಿದ್ದವು. ಆದರೆ ಕರ್ನಾಟಕದಲ್ಲಿ ಈಗಾಗಲೇ ವೈಮಾಂತರಿಕ್ಷ ಉತ್ಪಾದನೆಗೆ ಸಂಬಂಧಿಸಿದ ಕಂಪನಿಗಳು ಇರುವ ಕಾರಣಕ್ಕೆ ಏರ್‌ಬಸ್‌-ಟಾಟಾ ಕಂಪನಿಗಳು ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿವೆ.

ವಿಶ್ವದಲ್ಲಿ ಏರ್‌ಬಸ್‌ ಕಂಪನಿಯು ಫ್ರಾನ್ಸ್‌, ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಮಾತ್ರ ಘಟಕ ಹೊಂದಿದ್ದು ಕೋಲಾರದ್ದು ನಾಲ್ಕನೇ ಘಟಕವಾಗಿದೆ. ಭಾರತೀಯ ವಾಯುಪಡೆಗಾಗಿ ಈ ಎರಡೂ ಕಂಪನಿಗಳು ಜತೆಗೂಡಿ ಎಚ್‌125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣಾ ವಿಭಾಗವನ್ನು ಕೋಲಾರದಲ್ಲಿ ತೆರೆಯಲಿವೆ ಎಂದು ವರದಿಗಳು ತಿಳಿಸಿವೆ. ವಾರ್ಷಿಕ 10 ಹೆಲಿಕಾಪ್ಟರ್‌ಗಳನ್ನು ಆರಂಭಿಕ ಹಂತದಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ 2 ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್‌ಗಳಿಗೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಬೇಡಿಕೆ ಬರಬಹುದು ಎಂದು ಏರ್‌ಬಸ್‌ ಅಂದಾಜಿಸಿದೆ.