ಕೋಲಾರ ಎಪಿಎಂಸಿ ಮಾರುಕಟ್ಟೆ ವಿಸ್ತರಣೆಗೆ ಗ್ರಹಣ

| Published : Feb 19 2024, 01:31 AM IST

ಸಾರಾಂಶ

ಜಾಗದ ಸಮಸ್ಯೆಯು ನೆನ್ನೆ ಮೊನ್ನೆಯದ್ದಲ್ಲ ಹಲವಾರು ದಶಕದಿಂದ ಕೊಳೆಯುತ್ತಿರುವ ಸಮಸ್ಯೆಯಾಗಿದೆ, ಈ ಸಮಸ್ಯೆಯನ್ನು ಬಗೆಹರಿಸಲು ನಿರಂತರವಾಗಿ ರೈತ ಸಂಘಟನೆಗಳು ಹೋರಾಟ ಮಾಡುತ್ತಾ ಬರುತ್ತಿವೆ, ಆದರೂ ಕೂಡ ಎಪಿಎಂಸಿ ಮಾರುಕಟ್ಟೆ ಜಾಗ ವಿಸ್ತರಿಸಲು ಸಾಧ್ಯವಾಗಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವವರು ಇಲ್ಲದೆ ರೈತರ ಗೋಳು ಅರಣ್ಯರೋದನವಾಗಿದೆ, ಮಾರುಕಟ್ಟೆ ಜಾಗ ಗುರುತಿಸುವುದು ಅಧಿಕಾರಿಗಳಿಗೆ ಸವಾಲಿನಂತಾಗಿದೆ, ಹಲವಾರು ವರ್ಷದಿಂದ ಈ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಬಾರಿಯ ರಾಜ್ಯ ಬಜೆಟ್ ಅಧಿವೇಶನದಲ್ಲಾದರೂ ಸರ್ಕಾರ ಬಗೆಹರಿಸಬಹುದೆಂಬ ನಿರೀಕ್ಷೆ ಸಹ ಹುಸಿಯಾಗಿ ಉಳಿದಿದೆ.

ಜಾಗದ ಸಮಸ್ಯೆಯು ನೆನ್ನೆ ಮೊನ್ನೆಯದ್ದಲ್ಲ ಹಲವಾರು ದಶಕದಿಂದ ಕೊಳೆಯುತ್ತಿರುವ ಸಮಸ್ಯೆಯಾಗಿದೆ, ಈ ಸಮಸ್ಯೆಯನ್ನು ಬಗೆಹರಿಸಲು ನಿರಂತರವಾಗಿ ರೈತ ಸಂಘಟನೆಗಳು ಹೋರಾಟ ಮಾಡುತ್ತಾ ಬರುತ್ತಿವೆ, ಆದರೂ ಕೂಡ ಎಪಿಎಂಸಿ ಮಾರುಕಟ್ಟೆ ಜಾಗ ವಿಸ್ತರಿಸಲು ಸಾಧ್ಯವಾಗಿಲ್ಲ.

ಮೂರು ದಶಕದ ಸಮಸ್ಯೆ

ನಗರದ ಎಂ.ಬಿ. ರಸ್ತೆಯಲ್ಲಿ ಟಿ.ಚೆನ್ನಯ್ಯ ಸಂತೆ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರುಕಟ್ಟೆಯನ್ನು ಕಳೆದ ೧೯೯೭ರಲ್ಲಿ ಕೊಂಡರಾಜನಹಳ್ಳಿ ಸಮೀಪದ ೧೮ ಎಕರೆ ೩೧ ಗುಂಟೆ ಜಾಗ ಗುರುತಿಸಿ ಸ್ಥಳಾಂತರಿಲಾಯಿತು. ನಂತರದಲ್ಲಿ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ ೨ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಬೆಳೆಯಿತು, ವಿಶೇಷವಾಗಿ ಕೋಲಾರದಲ್ಲಿ ಟೊಮೆಟೋ ಬೆಳೆಯು ಅಧಿಕವಾಗಿ ಬೆಳೆಯುವ ರೈತರಿಂದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಟೊಮೆಟೋ ಹಣ್ಣುಗಳಿಂದ ತುಂಬಿ ತುಳುಕಾಡುತ್ತಿದ್ದ ಹಿನ್ನಲೆಯಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ಟೊಮೆಟೋ ಮಾರುಕಟ್ಟೆ ಎಂದು ರೈತರಲ್ಲಿ ಪ್ರಚಲಿತವಾಯಿತು, ಆದರೆ ಮಾರುಕಟ್ಟೆಯ ಜಾಗದ ಸಮಸ್ಯೆ ಕಳೆದ ೩ ದಶಕದಿಂದ ಬಗೆಹರಿಸಲಾಗದ ಫೆಡಂಭೂತದ ಸಮಸ್ಯೆಯಾಗಿ ಕಾಡುತ್ತಿದೆ.

ಬೃಹತ್‌ ಟೊಮೆಟೋ ಮಾರುಕಟ್ಟೆಕೋಲಾರದ ಎಪಿಎಂಸಿ ಮಾರುಕಟ್ಟೆಗೆ ನೆರೆಯ ರಾಜ್ಯಗಳಾದ ಆಧ್ರ ಪ್ರದೇಶ, ತಮಿಳುನಾಡು, ನೆರೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗಗಳಿಂದ ರೈತರು ತಾವು ಬೆಳೆದ ತರಕಾರಿ ಮಾರುಕಟ್ಟೆಗೆ ತರುತ್ತಾರೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ೭೫ ಮತ್ತು ಮಾಲೂರು ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಮಾರುಕಟ್ಟೆಯು ಸಾಗಾಣಿಕೆಗಳಿಗೆ ಅನುಕೂಲರವಾಗಿದೆ, ಈ ಮಾರುಕಟ್ಟೆಯಿಂದ ಚೆನ್ನೈ, ಗುಜರಾತ್, ಕಲ್ಕತ್ತಾ, ದೆಹಲಿ, ಪಂಜಾಬ್, ನವದೆಹಲಿ ಮಾತ್ರವಲ್ಲದೆ ಹೊರದೇಶಗಳಾದ ಪಾಕಿಸ್ತಾನ ಮುಂತಾದ ಕಡೆ ಹಲವು ತರಕಾರಿಗಳನ್ನು ರಪ್ತು ಮಾಡಲಾಗುತ್ತದೆ.

ಆದರೆ ಮಾರುಕಟ್ಟೆಗೆ ಜಾಗ ಸಾಕಾದೆ ವಾಹನಗಳು ಎಪಿಎಂಸಿ ಸುತ್ತಮುತ್ತಲಿನ ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ, ಮಾಲೂರು ಮಾರ್ಗದ ರಸ್ತೆಗಳಲ್ಲಿ ಲಾರಿಗಳು, ಟ್ರಕ್‌ಗಳು, ಟೆಂಪೋಗಳನ್ನು ನಿಲ್ಲಿಸಿ ತರಕಾರಿಗಳನ್ನು ಲೋಡಿಂಗ್ ಮತ್ತು ಆನ್‌ಲೋಡಿಂಗ್ ಮಾಡುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆಗಳು ಹಲವಾರು ಬಾರಿ ಹೋರಾಟ ಮಾಡಿ ಜಾಗದ ಸಮಸ್ಯೆ ಕುರಿತು ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.ಜಾಗಕ್ಕಾಗಿ ವಿವಿಧೆಡೆ ಹುಡುಕಾಟ

ಎಪಿಎಂಸಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಮಾಲೂರು ಮಾರ್ಗದ ಸುಮಾರು ೫-೬ ಕಿ.ಮೀ ಅಂತರದಲ್ಲಿನ ಮಂಗಸಂದ್ರ, ಬೆಂಗಳೂರು ಹೆದ್ದಾರಿ ಮಾರ್ಗದಲ್ಲಿ ಅರಾಭಿಕೊತ್ತನೂರು, ಬೆಳಮಾರನಹಳ್ಳಿ ಸಮೀಪದಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಿ, ಇದಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ರೈತರ ಬಳಿಯು ಮಾತುಕತೆ ಮಾಡಲಾಯಿತು, ಆದರೂ ಪ್ರಯೋಜನವಾಗಲಿಲ್ಲ, ಈಗ ಬಂಗಾರಪೇಟೆ ಮಾರ್ಗದ ಈಕಂಬಳ್ಳಿ ಗ್ರಾಮದತ್ತ ಮುಖ ಮಾಡಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅರಾಭಿಕೊತ್ತನೂರು ಬಳಿ ಗುರುತಿಸಿರುವ ಜಾಗವು ಕೆರೆಯಂಗಳವಾಗಿದ್ದು ಇಂದಲ್ಲ ನಾಳೆ ಸಮಸ್ಯೆಯಾಗುವುದರಿಂದ ಜಾಗವು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅಲ್ಲದೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವ ಈ ಪ್ರದೇಶಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವುದು ಸುಲಭವಲ್ಲ.

ಬೆಳಮಾರನಹಳ್ಳಿ ಕೆರೆಯಂಗಳ ಸೂಕ್ತ

ಈಗ ಬೆಳಮಾರನಹಳ್ಳಿ ಸಮೀಪ ಗುರುತಿಸಿರುವ ಜಾಗವು ಹೆದ್ದಾರಿಯಿಂದ ಒಳ ಭಾಗದಲ್ಲಿರುವುದರಿಂದ ವಾಹನಗಳ ಮುಕ್ತ ಸಂಚಾರಕ್ಕೆ ಅಡೆತಡೆಗಳಾಗಲಿದೆ, ವಿಶಾಲವಾದ ರಸ್ತೆ ಸೌಲಭ್ಯವಿಲ್ಲ, ಇನ್ನು ಚೆಲುವನಹಳ್ಳಿ ಸಮೀಪದ ರೈತರು ಸರ್ಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿಕೊಂಡಿದ್ದಾರೆ. ಆದರೆ ಕೆರೆಯು ತನ್ನ ಸ್ವರೂಪ ಕಳೆದು ಕೊಂಡಿರುವುದರಿಂದ ಈ ಜಾಗವನ್ನು ಮಾರುಕಟ್ಟೆಗೆ ಬಳಸಲು ಸೂಕ್ತವಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.