-ಸಮಸ್ಯೆಗಳ ಆಗರ

-ಭವನದ ಮೂಲೆಯಲ್ಲಿ ಗಾಂಧಿ, ಅಂಬೇಡ್ಕರ್‌ ಫೋಟೋಗಳು ಮೂಲೆಗುಂಪು । ಕಸದ್ದೇ ಸಾಮ್ರಾಜ್ಯ । ಕಿತ್ತು ಹೋಗಿರುವ ಮೇಲ್ಛಾವಣಿ

ಸ್ಕಂದಕುಮಾರ್ ಬಿ.ಎಸ್

ಕನ್ನಡಪ್ರಭ ವಾರ್ತೆ ಕೋಲಾರ

ಇಡೀ ರಾಜ್ಯ ಹಾಗೂ ರಾಷ್ಟ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಕಾಂಗ್ರೆಸ್ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಇರುವ ಜಿಲ್ಲಾ ಭವನದಲ್ಲಿ ಅವ್ಯವಸ್ಥೆಗಳ ಗೂಡಾಗಿ ಮಾರ್ಪಟ್ಟಿದೆ.


ಜಿಲ್ಲಾ ಕೇಂದ್ರವಾದ ಕೋಲಾರದ ಹೃದಯ ಭಾಗದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಸದ ಸಾಮ್ರಾಜ್ಯದ ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ಭಾರತಕ್ಕೆ ಸಂವಿಧಾನವನ್ನು ಕೊಟ್ಟ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರೂ ಆಗಿರುವ ರಾಹುಲ್ ಗಾಂಧಿಯವರ ಭಾವಚಿತ್ರಗಳು ಕಸದ ಸಾಮ್ರಾಜ್ಯದಲ್ಲಿ ರಾರಾಜಿಸುತ್ತಿರುವುದು ಕೈ ನಾಯಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಾಂಗ್ರೆಸ್ ಭವನದ ಸ್ಥಿತಿ ಹೀಗಿರುವಾಗ ಇನ್ನೂ ಸಾರ್ವಜನಿಕರ ಹಿತಾಸಕ್ತಿಗಾಗಿ ಪಕ್ಷವು ಏನು ಮಾಡುತ್ತದೆ ಎಂಬುದನ್ನು ಕಸದ ರಾಶಿಯಲ್ಲಿರುವ ಈ ಭಾವಚಿತ್ರಗಳೇ ಸಾಕ್ಷಿಯಾಗಿವೆ. ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಇವೆಲ್ಲಾ ದೃಶ್ಯಗಳು ಕಂಡು ಬಂದಿದೆ.

ಚಂದ್ರಾರೆಡ್ಡಿ ಮುತುವರ್ಜಿ:

ಸುಮಾರು ೬೦ ವರ್ಷದ ಹಿಂದೆ ಅ. ೨೮/೧೯೬೮ರಲ್ಲಿ ಅಂದಿನ ಸಿ.ಎಂ. ವೀರೇಂದ್ರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಗೊಂಡಿತ್ತು, ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಭವನಕ್ಕೆ ಸುಣ್ಣಬಣ್ಣವಿಲ್ಲದೆ ಕಟ್ಟಡವು ಪಾಳುಕೊಂಪೆಯಾಗಿದ್ದ ಕಾಂಗ್ರೆಸ್ ಕಟ್ಟಡವನ್ನು ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದ ಕೆ. ಚಂದ್ರಾರೆಡ್ಡಿ ಮುತುವರ್ಜಿಯಿಂದ ತಮ್ಮ ಸ್ವಂತ ಹಣ ೧೦ ಲಕ್ಷ ರು. ಸೇರಿದಂತೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ೨೦ ಲಕ್ಷ ರು. ವೆಚ್ಚದಲ್ಲಿ ನವೀಕರಣ ಮಾಡಿದ್ದರು.

ಆದರೀಗ ಕಾಂಗ್ರೆಸ್ ಭವನದ ಸ್ಥಿತಿ ಅವ್ಯವಸ್ಥೆಯ ತಾಣವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಸೇರಿದಂತೆ ಮಹನೀಯರ ಭಾವಚಿತ್ರಗಳು ಕಸದ ರಾಶಿಯಲ್ಲಿ ಇದೆ. ಕಾಂಗ್ರೆಸ್ ಭವನದ ಕಟ್ಟಡದ ಮೇಲ್ಛಾವಣಿ ಕಿತ್ತುಹೋಗಿರುವುದು, ಎಲ್ಲೆಂದರಲ್ಲಿ ಗಿಡಗಂಟೆಗಳ ಬೇರುಗಳು ಇಡೀ ಕಟ್ಟಡವನ್ನೆಲ್ಲ ಆವರಿಸಿರುವುದು, ಹಾಳಾಗಿರುವ ಟೇಬಲ್‌ಗಳು ಚೇರುಗಳು, ಗೋಡೆಗಳಿಗೆ ಅಳವಡಿಸಿರುವ ಟೈಲ್ಸ್‌ಗಳೆಲ್ಲವೂ ಕಿತ್ತುಬಂದಿದೆ, ವಿದ್ಯುತ್ ಕಡಿತಗೊಂಡರೆ ಕನಿಷ್ಠ ಪಕ್ಷ ಜನರೇಟರ್ ಅಥವಾ ಯುಪಿಎಸ್ ಕೂಡ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾರ್ಯಕರ್ತರ ಸಭೆ ಸಮಾರಂಭಗಳಿಗೆ ಆಗಮಿಸುವ ಕ್ಷೇತ್ರದ ಜನಪ್ರತಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.

ಇನ್ನೂ ಮಾತ್ತೆತ್ತಿದ್ದರೆ ನಾವುಗಳು ಗಾಂಧಿ ಹಾಗೂ ಅಂಬೇಡ್ಕರ್ ಸಿದ್ಧಾಂತಗಳನ್ನು ಪಾಲಿಸುತ್ತೇವೆಂದು ಸಭೆ ಸಮಾರಂಭಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ, ಆದರೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿರುವ ಅವ್ಯವಸ್ಥೆಗಳು ಕಾಣಸಿಗಲಿಲ್ಲವೇ ವಿರೋಧ ಪಕ್ಷದ ಮುಖಂಡರ ಮಾತಾಗಿದೆ.

ಬಡಾಯಿ ಮಾತು: ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಕೋಟ್ಯಂತರ ರು. ಅನುದಾನ ತಂದಿದ್ದೇವೆಂದು ಬಡಾಯಿಕೊಚ್ಚಿಕೊಳ್ಳುವ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಕಾಂಗ್ರೆಸ್ ಭವನದ ಅವ್ಯವಸ್ಥೆಗಳು ಕಾಣಿಸಿಲ್ಲವೇ ಎಂಬುದು ಸಾರ್ವಜನಿಕರ ಮಾತಾಗಿದೆ. ಇದರೊಂದಿಗೆ ಅಧಿಕಾರಕ್ಕಾಗಿ ಕಿತ್ತಾಡುವ ಗುಂಪು ಘರ್ಷಣೆಗಳಿಗೆ ಸೀಮಿತವಾಗಿದೆಯೇ ಹೊರತಾಗಿದೆಯೇ ಹೊರತು ತಮ್ಮ ಪಕ್ಷದ ಭವನದ ನವೀಕರಣಕ್ಕೆ ಮುಂದಾಗಿಲ್ಲ. ಜಿಲ್ಲೆಗೆ ಮೆಡಿಕಲ್ ಕಾಲೇಜು, ಶಾಶ್ವತ ನೀರಾವರಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನಾವು ಟೊಂಕಕಟ್ಟಿ ನಿಲ್ಲುತ್ತೇವೆಂದು ಸಭೆ ಸಮಾರಂಭಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮೊದಲು ಜಿಲ್ಲಾ ಕೇಂದ್ರದಲ್ಲಿರುವ ಕಾಂಗ್ರೆಸ್ ಭವನವನ್ನು ಅಭಿವೃದ್ಧಿಪಡಿಸಲಿ ಎಂಬುದು ಮತದಾರರ ಆಶಯವಾಗಿದೆ.