ರೈತರ ಭೂಮಿ ವಾಪಸ್ ನೀಡುವಂತೆ 26ರಂದು ಕೋಲಾರ ರೈತ ಸಂಘ ಹೋರಾಟ

| Published : Nov 22 2024, 01:20 AM IST

ರೈತರ ಭೂಮಿ ವಾಪಸ್ ನೀಡುವಂತೆ 26ರಂದು ಕೋಲಾರ ರೈತ ಸಂಘ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಅಧಿಕಾರಿಗಳೇ ನಿಮಗೆ ತಾಕತ್ತಿದ್ದರೆ 24 ಗಂಟೆಯಲ್ಲಿ ಪ್ರಭಾವಿ ರಾಜಕಾರಣಿ ಅರಣ್ಯ ಭೂ ಒತ್ತುವರಿ ಮಾಡಿಕೊಂಡಿರುವ ರಮೇಶ್ ಕುಮಾರ್ ವಿರುದ್ಧ ಕ್ರಮಕೈಗೊಂಡು ನೂರಾರು ಎಕರೆ ಒತ್ತುವರಿ ತೆರವುಗೊಳಿಸಿ ಎಂದು ರೈತರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಮಾಜಿ ಸ್ಪೀಕರ್ ರಮೇಶ್‌ಕುಮಾರ್‌ ಅರಣ್ಯ ಭೂಮಿ ಒತ್ತುವರಿ 3 ದಿನಗಳೊಳಗೆ ತೆರವುಗೊಳಿಸಿ ಇಲ್ಲವೇ ಬಡ ರೈತರ ಭೂಮಿ ವಾಪಸ್ ನೀಡುವಂತೆ ಆಗ್ರಹಿಸಿ ನ.26ರ ಮಂಗಳವಾರ ಟ್ರ್ಯಾಕ್ಟರ್‌ಗಳ ಸಮೇತ ಕೋಲಾರ-ಬಂಗಾರಪೇಟೆ ರಾಜ್ಯ ಹೆದ್ದಾರಿ ಅರಣ್ಯ ಇಲಾಖೆ ಮುಂಭಾಗ ಬಂದ್ ಆಚರಿಸಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಿದರು.ನರಸಾಪುರ ಬಳಿ ರಾತ್ರೋರಾತ್ರಿ ಒತ್ತುವರಿ ತೆರವು ಮಾಡಿರುವ ರೈತರ ಜಮೀನಿನಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನೂರಾರು ಪೊಲೀಸರು, ಹತ್ತಾರು ಜೆಸಿಬಿಗಳೊಂದಿಗೆ ಬಡ ರೈತರ ಭೂಮಿ ತೆರವುಗೊಳಿಸಿ ಅವರು ಬದುಕನ್ನು ಬೀದಿಗೆ ತಳ್ಳಿರುವ ಅರಣ್ಯ ಅಧಿಕಾರಿಗಳೇ ನಿಮಗೆ ತಾಕತ್ತಿದ್ದರೆ 24 ಗಂಟೆಯಲ್ಲಿ ಪ್ರಭಾವಿ ರಾಜಕಾರಣಿ ಅರಣ್ಯ ಭೂ ಒತ್ತುವರಿ ಮಾಡಿಕೊಂಡಿರುವ ರಮೇಶ್ ಕುಮಾರ್ ವಿರುದ್ಧ ಕ್ರಮಕೈಗೊಂಡು ನೂರಾರು ಎಕರೆ ಒತ್ತುವರಿ ತೆರವುಗೊಳಿಸಿ ಎಂದು ಅರಣ್ಯಾಧಿಕಾರಿಗಳಿಗೆ ಸವಾಲು ಹಾಕಿದರು.ಜೆಸಿಬಿಗಳಿಗೆ ಪರ್ಯಾಯವಾಗಿ ರೈತರ ಟ್ರ್ಯಾಕ್ಟರ್‌ಗಳ ಮೂಲಕ ಅರಣ್ಯ ಅಧಿಕಾರಿಗಳೇ ಮೊದಲು ಒತ್ತುವರಿ ತೆರವುಗೊಳಿಸಿದ ಜಾಗದಿಂದಲೇ ಮತ್ತೆ ಆ ಭೂಮಿ ರೈತರಿಗೆ ಹಿಂದಿರುಗಿಸಲು ಟ್ರ್ಯಾಕ್ಟರ್‌ಗಳ ಘರ್ಜನೆಯೊಂದಿಗೆ ನೊಂದ ರೈತರ ಪರವಾಗಿ ರೈತಸಂಘ ಚಳವಳಿ ಕೈಗೆತ್ತಿಕೊಳ್ಳುವ ನಿರ್ಧಾರದ ಜೊತೆಗೆ ಎಚ್ಚರಿಕೆಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದರು.ಬಡ ರೈತರು ಅಧಿಕಾರಿಗಳ ಕೈಹಿಡಿದು ಕಾಲಿಗೆ ಬಿದ್ದು ಬೇಡಿಕೊಂಡರೂ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಬೆಳೆ ಉಳಿಸಿಕೊಳ್ಳಲು ಸಮಯ ನೀಡಲಿಲ್ಲ. ಆದರೆ, ಎಲ್ಲ ದಾಖಲೆಗಳಿದ್ದರೂ ಅರಣ್ಯ ಭೂಗಳ್ಳ ಎಂದು ಸಾಭೀತಾಗಿದ್ದರೂ ಪ್ರಭಾವಿ ರಾಜಕಾರಣಿ, ಮಾಜ ಸ್ಪೀಕರ್ ರಮೇಶ್‌ಕುಮಾರ್ ಸರ್ಕಾರದಿಂದ ಒಂದು ಫೋನ್ ಕಾಲ್‌ಗೆ ಸರ್ವೇ ಮುಂದೂಡಿ ತಾಂತ್ರಿಕ ಅಡಚಣೆ ಎಂದು ಹೇಳುತ್ತಿರುವ ಅಧಿಕಾರಿಗಳೇ ನಿಮಗೆ ಮಾನವೀಯತೆ ಇಲ್ಲವೇ ಎಂದು ಪ್ರಶ್ನೆ ಮಾಡಿದರು. 10 ಸಾವಿರ ಕೋಟಿ ಬೆಲೆ ಬಾಳುವ ಅರಣ್ಯ ಭೂಮಿ ಉಳಿಸಿರುವ ಅರಣ್ಯಾಧಿಕಾರಿಗಳಿಗೆ ಬೆಂಬಲವಾಗಿ ರೈತಸಂಘ ನಿಂತಿತ್ತು. ಆದರೆ, ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಪ್ರತ್ಯೇಕ ನ್ಯಾಯ ಎಂಬ ಸಂದೇಶ ರವಾನೆ ಮಾಡಿದ್ದೀರ. ನಿಮಗೆ ಸ್ವಾಭಿಮಾನ ಆತ್ಮಗೌರವ ಇದ್ದರೆ ತಪ್ಪು ಮಾಡದ ಬಡ ರೈತರ ಮೇಲೆ ನಿಮ್ಮ ಪ್ರತಾಪ ತೋರಿಸಿದಂತೆ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೋಟಿ ಕೋಟಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ದೊಡ್ಡ ಭೂಗಳ್ಳರ ವಿರುದ್ಧ ನಿಮ್ಮ ಪ್ರತಾಪ ಜೆಸಿಬಿ ಆರ್ಭಟ ತೋರಿಸಿ ಎಂದು ಸವಾಲು ಹಾಕಿದರು.ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶಿವಾರೆಡ್ಡಿ, ಚಂದ್ರಪ್ಪ, ಮಂಗಸಂದ್ರ ತಿಮ್ಮಣ್ಣ, ಸುಪ್ರೀಂಚಲ, ಯಲ್ಲಪ್ಪ, ಹರೀಶ್, ಅಪ್ಪೋಜಿರಾವ್, ಆಂಜಿನಪ್ಪ, ಪ್ರಭಾಕರ್, ರಾಮಸಾಗರ ವೇಣು, ಸುರೇಶ್‌ಬಾಬು, ಮಂಜುನಾಥ್, ರಾಜೇಶ್, ಫಾರೂಖ್, ಹೆಬ್ಬಣಿ ಆನಂದರೆಡ್ಡಿ ಇದ್ದರು.