ಕಾಂಗ್ರೆಸ್‌ ತೆಕ್ಕೆಗೆ ಕೊಲ್ಹಾರ ಪಟ್ಟಣ ಪಂಚಾಯಿತಿ

| Published : Feb 13 2025, 12:46 AM IST

ಸಾರಾಂಶ

ನಿರೀಕ್ಷೆಯಂತೆ ಕೊಲ್ಹಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ನಿರೀಕ್ಷೆಯಂತೆ ಕೊಲ್ಹಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಿತು.

ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಉಪಾಧ್ಯಕ್ಷ ಸ್ಥಾನಕ್ಕೆ ರಾಜಮಾ ನದಾಫ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಸದ ಕಾರಣ ಇರ್ವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ, ತಹಸೀಲ್ದಾರ್‌ ಎಸ್.ಎಸ್ ನಾಯಕಲಮಠ ಘೋಷಿಸಿದರು.

ಕೊಲ್ಹಾರ ಪಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಒಟ್ಟು 17 ಸದಸ್ಯರ ಬಲಾಬಲದ ಕೊಲ್ಹಾರ ಪಪಂಯಲ್ಲಿ 11 ಕಾಂಗ್ರೆಸ್‌, 2 ಎಐಎಂಐಎಂ, 1 ಪಕ್ಷೇತರ ಬೆಂಬಲ ಸೇರಿ ಒಟ್ಟು 14 ಸದಸ್ಯರ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೂವರು ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.

ವಿಜಯೋತ್ಸವ:

ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಹಾಗೂ ರಾಜಮಾ ನದಾಫ ಅವರನ್ನು ಸಚಿವ ಶಿವಾನಂದ ಪಾಟೀಲ ಈ ಸಂದರ್ಭದಲ್ಲಿ ಸನ್ಮಾನಿಸಿದರು. ಸಚಿವ ಶಿವಾನಂದ ಪಾಟೀಲರ ಶ್ರಮದಿಂದ ಕೊಲ್ಹಾರ ಪಟ್ಟಣ ಶರವೇಗದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸರ್ವ ಸದಸ್ಯರ ಬೆಂಬಲದೊಂದಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಾದವರು ಸಚಿವರ ಜೊತೆ ಕೈ ಜೊಡಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎನ್ನುವ ನಂಬಿಕೆಯಿದೆಂದು ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ ತಿಳಿಸಿದರು.

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಈ ವೇಳೆ ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್‌ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಮಹೇಶ ಗಿಡ್ಡಪ್ಪಗೋಳ, ತಾನಾಜಿ ನಾಗರಾಳ, ಸುರೇಶ ಹಾರಿವಾಳ ಪ ಪಂ ಸದಸ್ಯರು ಕಾಂಗ್ರೆಸ ಮುಖಂಡರು ಹಾಗೂ ಇನ್ನಿತರರು ಇದ್ದರು.