೨೫ಕ್ಕೆ ಕೋಲಿ ಸಮಾಜದ ಸಮಾವೇಶ: ಮಹೇಶ ಸಾತನೂರ

| Published : Feb 03 2024, 01:46 AM IST

ಸಾರಾಂಶ

ಚಿತ್ತಾಪುರ ತಾಲೂಕಿನಿಂದ ೨೫ ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದು ಕೋಲಿ ಸಮಾಜ ಯುವ ಅಧ್ಯಕ್ಷ ಕಾಶಪ್ಪ ಡೊಣಗಾಂವ ಹೇಳಿದರು. ಚಿತ್ತಾಪುರ ಪಟ್ಟಣದಲ್ಲಿ ಯುವ ಕೋಲಿ ಸಮಾಜದ ಅಧ್ಯಕ್ಷ ಮಹೇಶ ಸಾತನೂರ ಹಾಗೂ ಕಾಶಪ್ಪ ಡೊಣಗಾಂವ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಕೋಲಿ ಸಮಾಜದ ಚಿಂತಕರು ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ಕೋಲಿ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಲಬುರಗಿಯಲ್ಲಿ ಫೆ.೨೫ ರಂದು ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಚಿತ್ತಾಪುರ ತಾಲೂಕಿನಿಂದ ೨೫ ಸಾವಿರ ಜನರು ಭಾಗಿಯಾಗಲಿದ್ದೇವೆ ಎಂದು ಕೋಲಿ ಸಮಾಜ ಯುವ ಅಧ್ಯಕ್ಷ ಮಹೇಶ ಸಾತನೂರ ಹಾಗೂ ಕಾಶಪ್ಪ ಡೊಣಗಾಂವ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಕೋಲಿ ಸಮಾಜದ ಹಿತ ಚಿಂತಕರಾಗಿರುವ ತಿಪ್ಪಣ್ಣಪ್ಪ ಕಮಕನೂರ ಅವರು ಎಸ್ಟಿ ಸೇರ್ಪಡೆ ವಿಷಯವಾಗಿ ಅಧಿವೇಶನದಲ್ಲಿ ಹಲವು ಬಾರಿ ಚರ್ಚೆ ಮಾಡಿದ್ದಾರೆ. ಅಲ್ಲದೇ ಸಮಾವೇಶದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.

ನಮ್ಮಲ್ಲಿಯ ಕೆಲ ಸಮಾಜದ ಧುರಿಣರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ತಮಗೆ ಕರೆಯಲಿಲ್ಲ, ಚರ್ಚಿಸಿಲ್ಲ ಎನ್ನುವ ಕ್ಷುಲ್ಲಕ ವಿಷಯವನ್ನು ಇಟ್ಟುಕೊಂಡು ತಾಲೂಕಿನಲ್ಲಿ ಯಾರಿಗೂ ಸಂಪರ್ಕ ಮಾಡದೇ ತಮಗೆ ಬೇಕಾದವರನ್ನು ಇಟ್ಟುಕೊಂಡು ಸಮಾವೇಶ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ ಇದು ಅವರು ಸಮಾಜಕ್ಕೆ ಮಾಡುತ್ತಿರುವ ದೊಡ್ಡ ಮೊಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹಿಷ್ಕಾರ ವಿಚಾರವು ಅವರ ವೈಯಕ್ತಿಕ ವಿಚಾರವಾಗಿದ್ದು ಇದು ಸಮಾಜದ ನಿರ್ಣಯವಲ್ಲ. ಕೆಲವರು ತಮ್ಮ ಸ್ವಹಿತಾಸಕ್ತಿ ಹಾಗೂ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಮಾವೇಶವನ್ನು ವಿರೋಧ ಮಾಡುತ್ತಿದ್ದಾರೆ. ಅಂದಿನ ಸಮಾವೇಶ ಕುರಿತು ಸಮಾಜದವರಿಗೆ ವಾಸ್ತವ ಹೇಳಿ ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಸಮಾವೇಶವನ್ನು ಅತೀ ಯಶಸ್ವಿಯಾಗಿ ಯುವಕರು ಮಾಡಲಿದ್ದಾರೆ ಎಂದು ಹೇಳಿದರು.

ಯುವ ಕೋಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಅಲ್ಲೂರ, ನಗರ ಅಧ್ಯಕ್ಷ ರಾಜೇಶ ಹೊಳಿಕಟ್ಟಾ, ಆನಂದ ಯರಗಲ್, ತಮ್ಮಣ್ಣ ಹೊನಗೇರಿ, ಗೂಳಿ ಡಿಗ್ಗಿ, ಮಹೇದೇವ ಬೂನಿ, ದೇವಿಂದ್ರ ಹಾಸಬಾ, ಭಾಗಣ್ಣ ಹಲಕಟ್ಟಾ, ಮಲ್ಲು ಕಟ್ಟಿಮನಿ, ಬಸವರಾಜ ತಳವಾರ, ಬಸವರಾಜ ಮೈನಾಳಕರ್, ಸಾಬಣ್ಣ ಹೊಳಿಕಟ್ಟಾ, ಶರಣು ಅಣಕಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.