ಫೆ.25ರಂದು ಕೋಲಿ ಸಮಾಜದ ಸಮಾವೇಶ

| Published : Feb 08 2024, 01:32 AM IST

ಸಾರಾಂಶ

ರಾಜ್ಯ ಮಟ್ಟದ ಕೋಲಿ ಸಮಾಜದ ಬೃಹತ್ ಸಮಾವೇಶಕ್ಕೆ ನಗರದ ವಿವಿಧ ಬಡಾವಣೆಗಳ ಸಮಾಜ ಮುಖಂಡರು ಒಕ್ಕೂರಲಿನ ಬೆಂಬಲ.ಕಲಬುರಗಿ, ಕೋಲಿ ಸಮಾಜ, ಬೃಹತ್‌ ಸಮಾವೇಶ, ಸಮಾವೇಶ ಯಶಸ್ವಿಗೆ ಸಹಕರಿಸಿ:

ಕನ್ನಡಪ್ರಭ ವಾರ್ತೆ ಕಲಬುರಗಿ

ಇದೇ ಫೆ.25ರಂದು ನಗರದ ಎನ್.ವಿ. ಮೈದಾನದಲ್ಲಿ ನಡೆಯಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶಕ್ಕೆ ನಗರದ ವಿವಿಧ ಬಡಾವಣೆಗಳ ಸಮಾಜ ಮುಖಂಡರು ಒಕ್ಕೂರಲಿನ ಬೆಂಬಲ ಸೂಚಿಸಿದರು.

ಕಲ್ಬುರ್ಗಿಯ ಗಂಗಾ ನಗರದ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗಂಗಾ ನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜೀಣೋದ್ದಾರ ಸಂಘ, ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್, ಗಂಗಾನಗರದ ಕರ್ನಾಟಕ ಕೋಲಿ ಸೈನ್ಯ, ಗಂಗಾನಗರದ ಅಂಬಿಗರ ಸೇವಾ ದಳ, ಗಂಗಾನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ, ಮಾಣಿಕೇಶ್ವರಿ ಕಾಲೋನಿಯ ನಿಜಶರಣ ಅಂಬಿಗರ ಚೌಡಯ್ಯ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವಾರು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ ಇದೇ 25 ರಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಕರೆದುಕೊಂಡು ಬರಲು ನಿರ್ಣಯ ಕೈಗೊಂಡರು.

ಸಮಾಜದ ಮುಖಂಡರಾದ ಬಸವರಾಜ್ ಹರವಾಳ ಮತ್ತು ರಮೇಶ ನಾಟಿಕರ ಮಾತನಾಡಿ, 25ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶಕ್ಕೆ ಸಮಾಜದ ಎಲ್ಲಾ ಮುಖಂಡರು ಪಕ್ಷಬೇಧ ಮರೆತು ಭಾಗವಹಿಸಬೇಕು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಇದು ಏಕ ಪಕ್ಷೀಯ ನಿರ್ಣಯವಲ್ಲ ಎಂದಿದ್ದಾರೆ.

ಕೆಲವರು ಅವರ ಉದ್ದೇಶ ತಿಳಿದುಕೊಳ್ಳದೆ ಏಕ ಪಕ್ಷೀಯ ನಿರ್ಣಯವೆಂದು ಇಲ್ಲಸಲ್ಲದ ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ದಯವಿಟ್ಟು ಎಲ್ಲರೂ ಇದೇ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಭಾಗವಹಿಸಿ ಸಲಹೆ ಸೂಚನೆ ನೀಡಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.