ಭಾರಿ ಮಳೆ ಹಿನ್ನೆಲೆ ಪ್ರವಾಹ ಭೀತಿಯಲ್ಲಿ ಕೊಳ್ಳೇಗಾಲದ ನದಿ ಪಾತ್ರದ ಗ್ರಾಮಗಳು

| Published : Jul 27 2024, 12:53 AM IST

ಸಾರಾಂಶ

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೊಳ್ಳೇಗಾಲ ತಾಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೆಗಾಲ

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದ್ದು ತಾಲೂಕಿನ ಹಳೇ ಹಂಪಾಪುರ ಗ್ರಾಮದ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದೆ. ಇದರ ಪರಿಣಾಮ ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳ ಜನ ಈ ಬಾರಿಯು ಪ್ರವಾಹ ಭೀತಿ ಎದುರಿಸುವಂತಾಗಿದೆ. ರಾಜ್ಯದ ಕರಾವಳಿ ತೀರದ ಜಿಲ್ಲೆಗಳಲ್ಲಿ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ನಿರಂತರವಾಗಿ ಹರಿದು ಬರುತ್ತಿರುವುದರಿಂದ ಜಲಾಶಯಗಳು ಅದಾಗಲೇ ತುಂಬಿ ಭರ್ತಿಯಾಗಿದ್ದು ಜಲಾಶಯಗಳಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿದೆ.

ನಿನ್ನೆ ಸಂಜೆ 1.10 ಲಕ್ಷ ಕ್ಯೂಸೆಕ್ಸ್‌ಗೂ ಅಧಿಕ ನೀರನ್ನು ನದಿಗೆ ಹರಿ ಬಿಟ್ಟಿದ್ದು, ಕೊಡುಗು ಜಿಲ್ಲೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಹೆಚ್ಚುವರಿ ನೀರು ಕೆಆರ್‌ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳು ಆತಂಕ ಪಡುವಂತಾಗಿದೆ.

ಕಬಿನಿ ಹಾಗೂ ಕೆಆರ್‌ಎಸ್ 2 ಅಣೆಕಟ್ಟೆಗಳಿಂದ 1.10. ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನತೆ ಕಳೆದ ಬಾರಿಯಂತೆ ಈ ಭಾರಿಯು ಮಳುಗಡೆಯ ಭೀತಿ ಎದುರಿಸುವಂತಾಗಿದೆ. ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಹಾಗಾಗಿ ಕೆಳಭಾಗದಲ್ಲಿರುವ ಕೊಳ್ಳೇಗಾಲ ತಾಲೂಕಿನ ಕೆಲವು ನದಿ ಪಾತ್ರದ ಜನ ಪ್ರತಿವರ್ಷ ಪ್ರವಾಹ ಭೀತಿ ಎದುರಿಸುವಂತಾಗಿದೆ.

ನಿನ್ನೆವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನದಿ ರಾತ್ರಿ ಜಮೀನುಗಳಿಗೆ ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.ಈಗಾಗಲೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳೊಡನೆ ನದಿ ತೀರದ ಗ್ರಾಮಗಳಿಗೆ ಮುಂಜಾಗೃತವಾಗಿ ಭೇಟಿ ನೀಡಿ ನದಿಯಲ್ಲಿ ಪ್ರವಾಹದ ಮಟ್ಟ ತಗ್ಗುವವರೆಗೆ ನದಿ ತೀರದ ಗ್ರಾಮಗಳ ಜನರು ನದಿಯ ಬಳಿ ತೆರಳುವುದಾಗಲಿ ನೀರಿಗೆ ಇಳಿಯುವುದಾಗಲಿ ಮಾಡಬಾರದು. ತಮ್ಮ ಜಾನುವಾರುಗಳನ್ನು, ಮಕ್ಕಳನ್ನು ನದಿಯ ಬಳಿ ತೆರಳದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದಾರೆ.

ಅಣೆಕಟ್ಟೆಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರಬಹುದು. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಿದೆ. ತೀರದ ಗ್ರಾಮಗಳ ಜನರು ಯಾವುದೇ ಕ್ಷಣದಲ್ಲಾದರು ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು. ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಇಂದು ಬೆಳಿಗ್ಗೆ ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಮಹೇಶ್ ಅವರು ಹಳೆ ಹಂಪಾಪುರ ಗ್ರಾಮಕ್ಕೆ ಭೇಟಿ ನೀಡಿ ಜಲಾವೃತಗೊಂಡಿರುವ ಜಮೀನುಗಳನ್ನು ವೀಕ್ಷಿಸಿ ರೈತರಿಗೆ ಎಚ್ಚರಿಕೆ ಜೊತೆ ಮಾರ್ಗದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೆ ಸ್ಥಳೀಯ ಗ್ರಾಪಂಗಳಿಂದ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವ ಬಗ್ಗೆ ನದಿ ತೀರದ ಗ್ರಾಮಗಳಲ್ಲಿ ಟಾಂಟಾಂ ಹೊರಡಿಸಲಾಗಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪ್ರವಾಹ ಭೀತಿ ಎದುರಿಸಲು ಕ್ರಮ ವಹಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.