ಕೊಲ್ಲೂರು: ವೈಭವದ ವಿಜಯ ದಶಮಿ ಉತ್ಸವ ಸಂಪನ್ನ
KannadaprabhaNewsNetwork | Published : Oct 25 2023, 01:15 AM IST
ಕೊಲ್ಲೂರು: ವೈಭವದ ವಿಜಯ ದಶಮಿ ಉತ್ಸವ ಸಂಪನ್ನ
ಸಾರಾಂಶ
ಕಳೆದ ಒಂಬತ್ತು ದಿನಗಳಿಂದ ವಿವಿಧ ರೀತಿಯ ಹೋಮಹವನಾದಿಗಳಿಂದ ಪೂಜಿಸಲಾದ ದೇವಿಯ ಉತ್ಸವ ಮೂರ್ತಿಗೆ ಸೋಮವಾರ ಬಲಿ ಸೇವೆ ನಡೆಸಿ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಉತ್ಸವ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ ಇಲ್ಲಿನ ಇತಿಹಾಸ ಪ್ರಸಿದ್ಧ ಶಕ್ತಿಪೀಠ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ನಡೆದ ನವರಾತ್ರಿಯ ವೈಭವದ ವಿಜಯದಶಮಿ ಉತ್ಸವಕ್ಕೆ ರಾಜ್ಯ- ಹೊರರಾಜ್ಯಗಳ ಸಾವಿರಾರು ಮಂದಿ ಭಕ್ತರು ಸಾಕ್ಷಿಗಳಾದರು. ಕಳೆದ ಒಂಬತ್ತು ದಿನಗಳಿಂದ ವಿವಿಧ ರೀತಿಯ ಹೋಮಹವನಾದಿಗಳಿಂದ ಪೂಜಿಸಲಾದ ದೇವಿಯ ಉತ್ಸವ ಮೂರ್ತಿಗೆ ಸೋಮವಾರ ಬಲಿ ಸೇವೆ ನಡೆಸಿ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಉತ್ಸವ ನಡೆಸಲಾಯಿತು. ದೇವಸ್ಥಾನದ ತಂತ್ರಿ ನಿತ್ಯಾನಂದ ಅಡಿಗರು ಉತ್ಸವದ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ನೆರೆದ ಸಾವಿರಾರು ಭಕ್ತರು ದೇವಿಗೆ ಜೈಕಾರ ಹಾಕುತ್ತಾ ದೇವಳದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ರಥ ಎಳೆದರು. ನಂತರ ರಥದ ಮೇಲಿನಿಂದ ಆರ್ಚಕರು ನಾಣ್ಯ, ಚಿನ್ನ, ಬೆಳ್ಳಿಯನ್ನು ಭಕ್ತರಿಗೆ ವಿತರಿಸಿದರು, ಇದನ್ನು ಪಡೆದುಕೊಳ್ಳಲು ಭಕ್ತರ ಸ್ಪರ್ಧೆಯಿಂದ ಉಟಾದ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಹಾಗೂ ದೇಗುಲದ ಸಿಬ್ಬಂದಿ ಹರ ಸಾಹಸ ಪಡಬೇಕಾಯಿತು. ದೇವಿ ಪ್ರಯಾಣಿದ ರಥದ ಹೂವುಗಳನ್ನು ಭಕ್ತರು ಪವಿತ್ರ ಪ್ರಸಾದ ಎಂದು ಬಾವಿಸುವುದರಿಂದ, ಉತ್ಸವ ಮೂರ್ತಿಯನ್ನು ರಥದಿಂದ ಅವರೋಹಣಗೊಳಿಸುತ್ತಿದ್ದಂತೆ ಕಾಯುತ್ತಿದ್ದ, ಭಕ್ತರು, ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಕಿತ್ತು, ಕ್ಷಣಮಾತ್ರದಲ್ಲಿ ಅಲಂಕೃತ ರಥವನ್ನು ಬರಿದುಗೊಳಿಸಿದರು. ನಿರೀಕ್ಷೆಗೂ ಮೀರಿ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವೈವಿಧ್ಯಮಯ ಕಲಾತಂಡಗಳು ದೇಗುಲದ ಸ್ವರ್ಣಮುಖಿ ಮಂಟಪದಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕ ಗೋಪಾಲ ಪೂಜಾರಿ, ರಾಜ್ಯ ಗೃಹ ರಕ್ಷಕ ಇಲಾಖೆಯ ಡಿಸಿಜಿ ಹಾಕೆ ಅಕ್ಷಯ್ ಮಚ್ಚಿಂದ್ರ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ ಶೇಖರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು ಮುಂತಾದವರಿದ್ದರು. ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸವಿತ್ರತೇಜ, ಕೊಲ್ಲೂರು ಎಸ್ಐ ಗಳಾದ ಜಯಶ್ರೀ ಹಾಗೂ ಸುಧಾರಾಣಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಬಾಕ್ಸ್ ಅಕ್ಷರಾಭ್ಯಾಸ - ನವಾನ್ನಪ್ರಾಶನ ವಿಜಯದಶಮಿಯ ಪ್ರಯುಕ್ತ ಸೋಮವಾರ ಬೆಳಗ್ಗೆ 3 ಗಂಟೆಯಿಂದ ಮಕ್ಕಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ, ಕದಿರು ಹಬ್ಬದ ಆಚರಣೆ, ನವಾನ್ನ ಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು. ಬಾಕ್ಸ್ ಅಬ್ಬರದ ಹುಲಿವೇಷ ಸೇವೆ. ಜಿಲ್ಲೆಯ ಪ್ರಸಿದ್ಧ ಹುಲಿವೇಷ ತಂಡವಾದ ಮಲ್ಪೆ ಕೊಳ ಫ್ರೆಂಡ್ಸ್ ಸದಸ್ಯರು ವಿಜಯದಶಮಿ ಉತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ನಡೆಸಿದ ಹುಲಿ ವೇಷ ನರ್ತನ ಸೇವೆಯು ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ಫೋಟೋ ಃ ಕೊಲ್ಲೂರು ಮುಕಾಂಬಿಕಾ ಕೊಲ್ಲೂರಿನಲ್ಲಿ ವಿಜಯದಶಮಿ ಉತ್ಸವದ ಪ್ರಯುಕ್ತ ನಡೆದ ರಥೋತ್ಸವ