ಸಾರಾಂಶ
ಶಹಾಪುರ ತಾಲೂಕಿನ ಕೊಳ್ಳೂರ (ಎಂ) ಗ್ರಾಮದ ಕೃಷ್ಣಾ ನದಿ ಸೇತುವೆ ಮುಳುಗಡೆ ಭೀತಿ ಎದುರಾಗಿದ್ದರಿಂದ ಅಲ್ಲಿನ ಸಂಚಾರ ವ್ಯವಸ್ಥೆ ಬಂದ್ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ನಾರಾಯಣಪುರ ಬಸವಸಾಗರ ಜಲಾಶಯದಿಂದ 3ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ತಾಲೂಕಿನ ಕೊಳ್ಳೂರ(ಎಂ) ಸೇತುವೆ ಬಹುತೇಕ ಮುಳುಗಡೆ ಭೀತಿ ಎದುರಾಗಿದ್ದು, ಈ ರಸ್ತೆ ಮೂಲಕ ಸಂಚಾರ ಬಂದ್ ಮಾಡಲಾಗಿದೆ. ಕಲಬುರಗಿ-ರಾಯಚೂರು-ಯಾದಗಿರಿ ಜಿಲ್ಲೆಗಳ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಸಂಚಾರ ಅವ್ಯವಸ್ಥೆ ಎದುರಾಗುವ ಸಾಧ್ಯತೆಯಿದೆ.ನದಿ ಪಾತ್ರದ ಗ್ರಾಮಗಳ ಜನರು ನದಿಗೆ ಇಳಿಯದಂತೆ ಹಾಗೂ ತಮ್ಮ ಜಾನುವಾರಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ಪ್ರವಾಹದ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸೂಚಿಸಲಾಗಿದೆ ಎಂದು ತಹಸಿಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದ್ದಾರೆ.
ಯಾದಗಿರಿ, ರಾಯಚೂರು, ಕಲಬುರ್ಗಿ ಮೂರು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.ತಾಲೂಕಿನ ಕೊಳ್ಳೂರ (ಎಂ) ಗ್ರಾಮದ ಕೃಷ್ಣಾ ನದಿ ಸೇತುವೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಸೇತುವೆ ಮುಳುಗಡೆ ಭೀತಿಯಿಂದಾಗಿ ಪೊಲೀಸರನ್ನು ನಿಯೋಜಿಸಿ ಮಾರ್ಗ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಹೊರ ಹರಿವಿನಿಂದ ಕೃಷ್ಣಾ ನದಿ ಪಾತ್ರದ 23 ಹಳ್ಳಿಗಳಿಗೆ ಪ್ರವಾಹದ ಭೀತಿ ಮತ್ತೆ ಎದುರಾಗಿದೆ. ನದಿ ದಂಡೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದ್ದು. ನದಿ ದಂಡೆಯ ಅಕ್ಕಪಕ್ಕದ ಗ್ರಾಮಸ್ಥರು ನದಿಯ ಸಮೀಪ ಹೋಗದಂತೆ ಗ್ರಾಮಗಳಲ್ಲಿ ಡಂಗೂರ ಹಾಕಿಸಲು ತಿಳಿಸಲಾಗಿದೆ.
ಈ ವೇಳೆ ನೋಡಲ್ ಅಧಿಕಾರಿ ಬಿಸಿಎಂ ಇಲಾಖೆಯ ಉಪನಿರ್ದೇಶಕ ಗಂಗಾಧರ ದೊಡ್ಮನಿ, ಉಪತಹಸಿಲ್ದಾರ್ ಸಂಗಮೇಶ್, ಎಎಸ್ಐ ವಿಠ್ಠಲ್, ಕೊಳ್ಳೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮರ್ದಾನೆಪ್ಪ ಇಂಗಳಗಿ ಸೇರಿದಂತೆ ಕಂದಾಯ, ಪೊಲೀಸ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.