ಕುಂದಾಪುರ: ಕಳೆದ ಹತ್ತು ದಿನಗಳಿಂದ ಲಕ್ಷಾಂತರ ಭಕ್ತರ ಭಾಗವಹಿಸಿದ್ದ ಮಹಾಶರನ್ನವರಾತ್ರಿ ಮಹೋತ್ಸವದ ಕೊನೆಯ ದಿನ ಬುಧವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ದೇವಿಯ ವೈಭವದ ಪುಷ್ಪ ರಥೋತ್ಸವ ನಡೆಯಿತು. ಇದಕ್ಕೆ ಮೊದಲು ನವರಾತ್ರಿ ಮೊದಲದಿನದಿಂದ ಮಹಾನವಮಿಯವರೆಗೆ ದೇವಸ್ಥಾನದಲ್ಲಿ ವಿವಿಧ ಪೂಜೆ, ಧಾರ್ಮಿಕ ವಿಧಿವಿಧಾನಗಳು ನಡೆದಿದ್ದವು. ಮಂಗಳವಾರ ತಂತ್ರಿ ರಾಮಚಂದ್ರ ಅಡಿಗ ಹಾಗೂ ಋತ್ವಿಜರಾದ ಗೋವಿಂದ ಅಡಿಗ, ಎನ್. ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿದವು. ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಗೆ ಪ್ರದಕ್ಷಿಣೆ ಹಾಗೂ ಬಲಿ ಸೇವೆ ನಡೆಸಲಾಯಿತು. ನಂತರ ಪುಷ್ಪಗಳಿಂದ ಅಲಂಕರಿಸಲಾದ ರಥದಲ್ಲಿ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿ, ರಥಪೂಜೆ ನೆರವೇರಿಸಲಾಯಿತು. ತಂತ್ರಿಗಳು ಶ್ರೀ ದೇವಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದ ಬಳಿಕ ನೆರೆದಿದ್ದ ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ರಥವನ್ನು ಎಳೆದರು.

ಕೇರಳದ ಭಕ್ತರಿಗೆ ಕೊಲ್ಲೂರು ನವರಾತ್ರಿಯ ಅತ್ಯಂತ ಪವಿತ್ರವಾಗಿದ್ದು, ವಿಶೇಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾಗವಹಿಸಿದ್ದರು, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜ, ಮಾಜಿ ಸಚಿವ ಆರ್. ಶಂಕರ್, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಡಾ. ಪಿ.ವಿ.ಅಭಿಲಾಶ್, ಯು. ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಧನಾಕ್ಷೀ ಪೂಜಾರಿ, ಸುಧಾ ಬೈಂದೂರು, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಐ.ಎಚ್.ತುಂಬಿಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಕೊಲ್ಲೂರು, ಅರ್ಚಕರಾದ ವಿಘ್ನೇಶ್ ಅಡಿಗ, ಸುರೇಶ್ ಭಟ್, ಮೂರ್ತಿ ಕಾಳಿದಾಸ್ ಭಟ್, ಶ್ರೀಶ ಭಟ್, ವಿವೇಕ್ ಅಡಿಗ ಮತ್ತಿತರರು ಉಪಸ್ಥಿತರಿದ್ದರು. ಲಕ್ಷಕ್ಕೂ ಅಧಿಕ ಭಕ್ತರ ದರ್ಶನ ಹತ್ತು ದಿನಗಳ ಕಾಲ ಲಕ್ಷಕ್ಕೂ ಅಧಿಕ ಭಕ್ತರು ಕೊಲ್ಲೂರಿಗೆ ಭೇಟಿ ನೀಡಿದ್ದರು, ಅವರೆಲ್ಲರಿಗೂ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿತ್ತು, ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಮೆಚ್ಚುಗೆಗೆ ಕಾರಣವಾಯಿತು. ಪ್ರತಿದಿನ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾಂಸ್ಕೃತಿಕ ತಂಡಗಳು ಸರಸ್ವತಿ ಮಂಟಪದಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿದ್ದವು.

ವಿಜಯದಶಮಿ - ಅಕ್ಷರಾಭ್ಯಾಸ: ವಿಜಯದಶಮಿ ಅಂಗವಾಗಿ ಬುಧವಾರ ಬೆಳಗಿನ ಜಾವ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪುಟಾಣಿಗಳ ಅಕ್ಷರಾಭ್ಯಾಸ ಕಾರ್ಯಕ್ರಮ ಆರಂಭವಾಯಿತು. ಋತ್ವಿಜರ ಮಾರ್ಗದರ್ಶನದಲ್ಲಿ ಮಕ್ಕಳು ಅಕ್ಷರಾಭ್ಯಾಸ ಮಾಡಿದರು. ಇದರೊಂದಿಗೆ ನವಾನ್ನಪ್ರಾಶನ ಹಾಗೂ ಸಂಜೆ ವಿಜಯೋತ್ಸವ ಕಾರ್ಯಕ್ರಮಗಳು ನಡೆದವು.