ಸಾರಾಂಶ
ವಿರಾಜಪೇಟೆಯ ಮಹಿಳೆಯೊಬ್ಬರು ತ್ರಿಚಕ್ರ ವಾಹನದ ಲೈಸನ್ಸ್ ಹೊಂದಿ ಪ್ರಪ್ರಥಮವಾಗಿ ಆಟೋ ಚಾಲಕಿಯಾಗಿ ಪಾದಾರ್ಪಣೆಗೊಂಡಿದ್ದಾರೆ.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಮಹಿಳಾ ಸಬಲೀಕರಣ ಆಗಬೇಕು ಆರ್ಥಿಕವಾಗಿ ಸದೃಡರಾಗಬೇಕು ಎನ್ನುವುದು ಪ್ರಧಾನಿ ಮಂತ್ರಿಗಳ ಕನಸು. ಕನಸು ನನಸಾಗಿಸುವ ನಿಟ್ಟಿನಲ್ಲಿ ವಿರಾಜಪೇಟೆ ನಗರದ ಮಹಿಳೆಯೊಬ್ಬರು ತ್ರಿಚಕ್ರ ವಾಹನದ ಲೈಸನ್ಸ್ ಹೊಂದಿ ಪ್ರಪ್ರಥಮವಾಗಿ ಆಟೋ ಚಾಲಕಿಯಾಗಿ ಪಾದಾರ್ಪಣೆಗೊಂಡಿದ್ದಾರೆ.ವಿರಾಜಪೇಟೆ ನಗರದ ಗಾಂಧಿನಗರದ ನಿವಾಸಿ ಜೈಸನ್ ಪತ್ನಿ ಕೋಮಲ ಪ್ರಿಯ ನಗರದ ಪ್ರಪ್ರಥಮ ಆಟೋ ಚಾಲಕಿಯಾಗಿ ಪಾದಾರ್ಪಣೆಗೊಂಡ ಮಹಿಳೆ. ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ವಿರಾಜಪೇಟೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗಣ್ಯರು ಮಾತನಾಡಿದರು.
ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್, ಮಹಿಳೆಯರು ಆರ್ಥಿಕವಾಗಿ ಮುಂದುವರೆಯುವ ನಿಟ್ಟಿನಲ್ಲಿ ಆಟೋ ಚಾಲಕಿಯಾಗಿ ಮುಂದಾಗಿರುವುದು ದಿಟ್ಟತನದ ಪ್ರತಿಕಾ. ಪುರುಷ ಪ್ರಧಾನವಾಗಿರುವ ದೇಶದಲ್ಲಿ ಎಲ್ಲರಂತೆ ಬದುಕು ತನ್ನದಾಗಿಸುವ ಪ್ರಯತ್ನ ಮಾಡಿರುವುದು ಉತ್ತಮ. ಕಾನೂನು ಪರಿಪಾಲನೆಯೊಂದಿಗೆ ದಾಖಲೆ ಪತ್ರಗಳನ್ನು ಸರಿದೂಗಿಸಿಕೊಂಡು ಚಾಲನೆಗೆ ಮುಂದಾಗಬೇಕು ಎಂದು ಹೇಳಿದರು.ಸಂಘದ ಗೌ. ಕಾನೂನು ಸಲಹೆಗಾರ ವಕೀಲರಾದ ಬಿ.ಎಸ್. ಪುಷ್ಪರಾಜ್, ಮಹಿಳಾ ಸಬಲೀಕರಣ ಒತ್ತು ನೀಡಿ ಆರ್ಥಿಕವಾಗಿ ಸುಧಾರಣೆ ಹೊಂದಲು ಮಹಿಳೆಯರು ಮುಂದಾಗಬೇಕು. ಹಿಂಜರಿಕೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಿಯ ಅವರು ಆಟೋ ಚಾಲಕಿಯಾಗಿ ಕ್ಷೇತ್ರಕ್ಕೆ ಆಗಮಿಸಿರುವುದು ಶ್ಲಾಘನೀಯ ಎಂದು ಶುಭಕೋರಿದರು.
ಕಾರ್ಯಕ್ರಮ ಉದ್ದೇಶಿಸಿ, ಪುರಸಭೆಯ ಉಪಾಧ್ಯಕ್ಷರಾದ ಫಾಸಿಯ ತಬ್ಸುಂ, ಹಿರಿಯ ಸದಸ್ಯರಾದ ಸಿ.ಕೆ. ಪೃಥ್ವಿನಾಥ್, ಸುನಿತಾ ಜೂನಾ, ಸಂಘದ ಸ್ಥಾಪಕ ಅಧ್ಯಕ್ಷರಾದ ಶಿವು ಮಾತನಾಡಿ ನೂತನ ಚಾಲಕಿಗೆ ಶುಭ ಹಾರೈಸಿದರು.ಜೈ ಭಾರತ್ ಅಟೋ ಚಾಲಕರು ಮತ್ತು ಮಾಲೀಕರ ಸಂಘ ವಿರಾಜಪೇಟೆ ಅಧ್ಯಕ್ಷರಾದ ಬೀಕಚಂಡ ಪುಟ್ಟ ಬೆಳ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ವಿರಾಜಪೇಟೆ ಪ್ರಧಾನ ಕಾರ್ಯದರ್ಶಿ ಜೀವನ್, ಗೌ.ಅಧ್ಯಕ್ಷರಾದ ಪ್ರಭು ಕುಟ್ಟಪ್ಪ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.