ಕೊಮ್ಮೆರಹಳ್ಳಿ: ವಿಜೃಂಭಣೆಯಿಂದ ಜರುಗಿದ ಹುಲಿವಾಹನೋತ್ಸವ

| Published : Nov 23 2025, 02:15 AM IST

ಸಾರಾಂಶ

ಮಹದೇಶ್ವರಸ್ವಾಮಿ ಹುಲಿವಾಹನ ಉತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸಾಮೂಹಿಕವಾಗಿ ಪಾಲ್ಗೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ಉಘೇ ಮಾದಪ್ಪ ಎಂಬ ಉದ್ಘೋಷ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೊಮ್ಮೆರಹಳ್ಳಿ ಬಳಿಯ ಚಿಕ್ಕಬೆಟ್ಟ ಹರಿಹರ ಕ್ಷೇತ್ರದಲ್ಲಿ ಮಹದೇಶ್ವರ ಗೆಳೆಯರ ಬಳಗದ ವತಿಯಿಂದ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ 8ನೇ ವರ್ಷದ ವಿಶೇಷ ಪೂಜೆ ಹಾಗೂ ಹುಲಿವಾಹನ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹುಲಿವಾಹನ ಉತ್ಸವಕ್ಕೆ ಪೂಜೆ ಸಲ್ಲಿಸಿದ ಮಂಡ್ಯದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು, ಕುಟುಂಬ ಸಮೇತರಾಗಿ ಬಸವನ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಳಿಕ ಮಾತನಾಡಿದ ಬಿ.ಸಿ.ಶಿವಾನಂದಮೂರ್ತಿ ಅವರು, ಈ ದೇವಾಲಯವನ್ನು ಅಭಿವೃದ್ಧಿಪಡಿಸಿರುವ ಎಲ್ಲ ಯುವ ಮುಖಂಡರ ಶ್ರಮ ಇಲ್ಲಿ ಕಾಣುತ್ತಿದೆ. ಕಾರ್ತಿಕ ಮಾಸದಲ್ಲಿ ಮಹದೇಶ್ವರನ ಪೂಜೆ ವಿಶೇಷವಾದುದು. ಇಂದು ಇಲ್ಲಿ ಹುಲಿವಾಹನೋತ್ಸವದಲ್ಲಿ ಪಾಲ್ಗೊಂಡಿದ್ದು ನನಗೆ ಬಹಳ ಸಂತಸವಾಗಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲೆಂದು ಹಾರೈಸಿದರು.

ಮಹದೇಶ್ವರಸ್ವಾಮಿ ಹುಲಿವಾಹನ ಉತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸಾಮೂಹಿಕವಾಗಿ ಪಾಲ್ಗೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ಉಘೇ ಮಾದಪ್ಪ ಎಂಬ ಉದ್ಘೋಷ ಮಾಡಿದರು.

ಎಲ್ಲ ಭಕ್ತರಿಗೆ ಪಂಚಾಮೃತ ಪ್ರಸಾದ ವಿತರಿಸಲಾಯಿತು. ಬಳಿಕ ನಡೆದ ಬೃಹತ್ ಅನ್ನಸಂತರ್ಪಣೆಯಲ್ಲಿ ಅವರೆಕಾಳು ಕೂಟು, ಮುದ್ದೆ, ಪಾಯಸ, ಬೂಂದಿ, ಅನ್ನ ಸಾಂಬಾರು, ಮಜ್ಜಿಗೆ, ಬಾತು ಬಡಿಸಲಾಯಿತು. ಕಾರ್ಯಕ್ರಮದಲ್ಲಿ ಎಎಸ್‌ಪಿ ತಿಮ್ಮಯ್ಯ, ಆರ್‌ಟಿಒ ಹೇಮಲತಾ, ಮಂಡ್ಯ ಡಿಆರ್ ಡಿಎಸ್‌ಪಿ ರಾಚಯ್ಯ, ನಗರಸಭೆ ಆಯುಕ್ತರಾದ ಪಂಪಶ್ರೀ, ಎಇಇ ಪುಟ್ಟಯ್ಯ, ಕಂದಾಯ ಅಧಿಕಾರಿ ರಾಜಶೇಖರ್, ಪರಿಸರ ಅಧಿಕಾರಿ ರುದ್ರೇಗೌಡ, ಮಹದೇಶ್ವರ ಗೆಳೆಯರ ಬಳಗದ ಮುಖಂಡರಾದ ಎಚ್.ಎಂ.ಶಂಕರ್, ವಸಂತ್, ಕೊಮೇರಹಳ್ಳಿ ವೆಂಕಟೇಶ್, ಕೃಷ್ಣ, ಕೃಷ್ಣಮೂರ್ತಿ, ವೆಂಕಟೇಶ್ ನಾಯಕ್, ಲೋಕೇಶ್, ಎಂ.ಬಿ.ರಮೇಶ್, ನಂದೀಶ್, ಮಹೇಂದರ್, ಕೃಷ್ಣ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.

ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹಲಗೂರು: ಮುತ್ತತ್ತಿ ರಸ್ತೆಯ ಭೀಮ ನದಿ ತೀರದಲ್ಲಿರುವ ಸೋಮೇಶ್ವರ ದೇವಸ್ಥಾನದಲ್ಲಿ ಕಡೆ ಕಾರ್ತಿಕದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಅರ್ಚಕ ತೇಜಸ್ ಕುಮಾರ್ ದೇವರ ಮೂರ್ತಿಯನ್ನು ಶುಚಿಗೊಳಿಸಿ ನಂಕಪ ಪಂಚಾಮೃತ ಅಭಿಷೇಕ, ರುದ್ರಾಭಿಷೇಕದ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿದರು. ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಸಂಜೆ ದೀಪವನ್ನು ಬೆಳಗಿಸಿ ಪೂಜೆ ಸಲ್ಲಿಸಿದರು. ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ಈ ವೇಳೆ ಶಾಮಿಯಾನ ಮಹದೇವಸ್ವಾಮಿ ,ಹೋಟೆಲ್ ನಾಗ ,ಶ್ರೀನಿವಾಸ ,ವೆಂಕಟೇಶ, ಉಮೇಶ, ಮಾಸ್ಟರ್ ಪರೀಣಿತ್ ಸೇರಿದಂತೆ ಇತರರು ಇದ್ದರು.