ಕೊಂಡಕುರಿ ವನ್ಯಧಾಮಕ್ಕೆ ಗ್ರಾಮಸ್ಥರ ಸಹಕಾರವಿದೆ: ಡಾ.ಸಂಜಯ್ ಗುಬ್ಬಿ

| Published : Oct 08 2024, 01:06 AM IST

ಕೊಂಡಕುರಿ ವನ್ಯಧಾಮಕ್ಕೆ ಗ್ರಾಮಸ್ಥರ ಸಹಕಾರವಿದೆ: ಡಾ.ಸಂಜಯ್ ಗುಬ್ಬಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕು ಕೊಂಬುಗಳುಳ್ಳ ಕೊಂಡಕುರಿ ವಿಶ್ವದಲ್ಲಿಯೇ ವಿಶಿಷ್ಟ, ಅಪರೂಪದ ಪ್ರಾಣಿ ಜಗಳೂರು ಅರಣ್ಯ ಪ್ರದೇಶದಲ್ಲಿದೆ. ಈ ಹಿನ್ನೆಲೆ ಕೊಂಡಕುರಿ ರಕ್ಷಣೆ ಮತ್ತು ವನ್ಯಧಾಮವಾಗಲು ಕಾಡಿನಂಚಿನ ಗ್ರಾಮಸ್ಥರ ಸಹಕಾರವಿದೆ ಎಂದು ವನ್ಯಜೀವಿ ಜೈವಿಕ ತಜ್ಞ ಡಾ.ಸಂಜಯ್ ಗುಬ್ಬಿ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರಲ್ಲಿ ೭೦ನೇ ವನ್ಯಜೀವಿ ಸಪ್ತಾಹ ಸಮಾರೋಪ । ಅರಣ್ಯ ಇಲಾಖೆಯಿಂದ ಸನ್ಮಾನ - - - ಕನ್ನಡಪ್ರಭ ವಾರ್ತೆ ಜಗಳೂರು

ನಾಲ್ಕು ಕೊಂಬುಗಳುಳ್ಳ ಕೊಂಡಕುರಿ ವಿಶ್ವದಲ್ಲಿಯೇ ವಿಶಿಷ್ಟ, ಅಪರೂಪದ ಪ್ರಾಣಿ ಜಗಳೂರು ಅರಣ್ಯ ಪ್ರದೇಶದಲ್ಲಿದೆ. ಈ ಹಿನ್ನೆಲೆ ಕೊಂಡಕುರಿ ರಕ್ಷಣೆ ಮತ್ತು ವನ್ಯಧಾಮವಾಗಲು ಕಾಡಿನಂಚಿನ ಗ್ರಾಮಸ್ಥರ ಸಹಕಾರವಿದೆ ಎಂದು ವನ್ಯಜೀವಿ ಜೈವಿಕ ತಜ್ಞ ಡಾ.ಸಂಜಯ್ ಗುಬ್ಬಿ ಹೇಳಿದರು.

ಪಟ್ಟಣದ ಎನ್‌ಎಂಕೆ ಶಾಲಾ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ''''೭೦ನೇ ವನ್ಯ ಜೀವಿ ಸಪ್ತಾಹ'''' ಸಮಾರೋಪ ಸಮಾರಂಭದಲ್ಲಿ ಇಲಾಖೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ೭ ವರ್ಷಗಳ ಹಿಂದೆ ಚಿರತೆ ದಾಳಿಗೆ ತುತ್ತಾಗಿ ಸಾವಿನಂಚಿನಲ್ಲಿದ್ದ ನಾನು ವನ್ಯಜೀವಿ ರಕ್ಷಣೆ ಮಾಡಿದ ಪುಣ್ಯಕ್ಕಾಗಿ ಪುನರ್ಜನ್ಮ ಪಡೆದಿರುವೆ. ಏಳುಬೀಳು ಬರುವುದು ಸಹಜ. ಎದೆಗುಂದದೆ ಮುನ್ನುಗ್ಗಬೇಕು. ಇಲ್ಲವಾದರೆ ಏನೂ ಸಾಧಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

4 ಪ್ರವೇಶ ದ್ವಾರಗಳಲ್ಲಿ ಕೊಂಡಕುರಿ ಪುತ್ಥಳಿ ನಿರ್ಮಾಣ:

ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣ ಸಂಪರ್ಕಿಸುವ ಮುಖ್ಯ ರಸ್ತೆಗಳ ನಾಲ್ಕು ಪ್ರವೇಶ ದ್ವಾರಗಳಲ್ಲಿ ಕೊಂಡಕುರಿ ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಮಗೆ ಸಮಾಜ ಏನು ಕೊಟ್ಟಿದೆ ಅನ್ನುವುದು ಮುಖ್ಯವಲ್ಲ. ನಾವು ಎಲ್ಲವನ್ನೂ ತೆಗೆದುಕೊಂಡಿದ್ದೇವೆ, ಮನುಷ್ಯರಾಗಿ ನಾವು ಏನನ್ನು ನೀಡಿದ್ದೇವೆ ಎನ್ನುವುದು ಲೆಕ್ಕ. ಜಲ, ನೆಲ, ಕಾಡುಗಳು ರಕ್ಷಣೆ ಮಾಡಲು ನಮ್ಮ ನಿಮ್ಮೆಲ್ಲ ಕರ್ತವ್ಯವಾಗಿದೆ ಎಂದರು.

ಜಾಗೃತಿ ಮೂಡಿಸಬೇಕು:

ವಕೀಲ ಹಾಗೂ ಪತ್ರಕರ್ತ ಡಿ.ಶ್ರೀನಿವಾಸ್ ಮಾತನಾಡಿ, ಬರದನಾಡು ಜಗಳೂರು ಕೊಂಡಕುರಿ ಪ್ರಾಣಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಭಯಾರಣ್ಯದಲ್ಲಿ ಚಿಂಕಾರ, ತೋಳ, ಚಿಪ್ಪುಹಂದಿ ಸೇರಿದಂತೆ ವಿವಿಧ ಪ್ರಬೇಧಗಳ ಪ್ರಾಣಿಗಳು ಹಾಗೂ ಪಕ್ಷಿ ಸಂಕುಲ ಕ್ರಮೇಣವಾಗಿ ಅಳಿವಿನಂಚಿಲ್ಲಿರುವುದು ಆತಂಕಕಾರಿಯಾಗಿದೆ. ವನ್ಯಜೀವಿ ರಕ್ಷಣಾ ಸಮಿತಿ ರಚಿಸಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಾರಿಕಾಂಬದೇವಿ ದೇವಸ್ಥಾನದಿಂದ ವನ್ಯಜೀವಿ ಅರಣ್ಯ ಸ್ಥಬ್ಧಚಿತ್ರದೊಂದಿಗೆ ಕಲಾತಂಡಗಳು, ಪ್ರಮುಖ ತಂಡಗಳ ಜಾಥಾಕ್ಕೆ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶ ಆರ್.ಚೇತನ್ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ಈ ಸಂದರ್ಭ ಪಪಂ ಅಧ್ಯಕ್ಷ ನವೀನ್ ಕುಮಾರ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ, ಶಶಿಧರ್, ತಹಸೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ. ಪಾಲಯ್ಯ, ವಕೀಲ ಸಂಘದ ತಾಲೂಕು ಅಧ್ಯಕ್ಷ ಟಿ.ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಭಾಗ್ಯಲಕ್ಷ್ಮೀ, ವರದ ರಂಗನಾಥ್, ಆರ್ ಎಫ್ ಶ್ರೀನಿವಾಸ್, ಜ್ಯೋತಿ, ಮಹೇಶ್ವರಪ್ಪ, ಪಪಂ ನಾಮನಿರ್ದೇಶಿತ ಸದಸ್ಯರಾದ ಜಯಣ್ಣ, ತಾನಾಜಿ ಗೋಸಾಯಿ, ಎನ್‌ಎಂಕೆ ಶಾಲಾ ಮುಖ್ಯಸ್ಥರಾದ ಎನ್.ಎಂ.ಲೋಕೇಶ್, ಹಾಲಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ತಾಲೂಕು ಅನುಷ್ಠಾಧಿಕಾರಿಗಳು ಇದ್ದರು.

- - -

ಬಾಕ್ಸ್‌ * ಕೊಂಡಕುರಿಗೆ ಸಿಕ್ಕಿದೆ ಸೂಕ್ತ ಭದ್ರತೆ ಡಾ. ಟಿ.ಜಿ. ರವಿಕುಮಾರ್ ಸನ್ಮಾನ ಸ್ವೀಕರಿಸಿ, ''''ಕೊಂಡಕುರಿ ಪತ್ತೆ ಹಚ್ಚುವಾಗ ವಿಂಡ್ ಫ್ಯಾನ್ ಕಂಪನಿಗಳ ಜೊತೆ ಕೈ ಜೋಡಿಸಲು ಮುಂದಾಗಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಕಷ್ಟು ಉಪದ್ರವ, ಅಪಪ್ರಚಾರ, ಹಲ್ಲೆಗಳು ನಡೆದವು. ಎದೆಗುಂದದೆ ಡಾ.ಸಂಜಯ್ ಗುಬ್ಬಿ ಅವರ ಸಹಕಾರದಿಂದ ಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದ ಕೊಂಡಕುರಿ ಪ್ರಾಣಿಗಳಿಗೆ ಸೂಕ್ತ ಭದ್ರತೆ ಸಿಕ್ಕಿದೆ. ಮುಂದಿನ ಪೀಳಿಗೆಗೂ ಕೊಂಡಕುರಿ ರಕ್ಷಣೆ ಅಗತ್ಯವಾಗಿದೆ ಎಂದರು.

- - - -07ಜೆ.ಎಲ್.ಆರ್.2:

ಸಮಾರಂಭದಲ್ಲಿ ವನ್ಯಜೀವಿ ಜೈವಿಕ ತಜ್ಞ ಡಾ.ಸಂಜಯ್ ಗುಬ್ಬಿ, ಡಾ.ರವಿಕುಮಾರ್, ಡಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.