ಸಾರಾಂಶ
ಕೊಂಡಾಪುರ ಗ್ರಾಮದ ಆರಾಧ್ಯ ದೇವರೆನಿಸಿದ ಬಸವೇಶ್ವರ ಜಾತ್ರಾ ಮಹೋತ್ಸವವು ನೂರಾರೂ ಭಕ್ತರ ಮಧ್ಯೆ ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಸಮೀಪದ ಕೊಂಡಾಪುರ ಗ್ರಾಮದ ಆರಾಧ್ಯ ದೇವರೆನಿಸಿದ ಬಸವೇಶ್ವರ ಜಾತ್ರಾ ಮಹೋತ್ಸವವು ನೂರಾರೂ ಭಕ್ತರ ಮಧ್ಯೆ ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ನೆರವೇರಿತು.ಸಮೀಪದ ಗೂಡೂರ ಗ್ರಾಮದ ಭೀಮಾನದಿಯಲ್ಲಿ ಗಂಗಸ್ನಾನ ಮಾಡಿಕೊಂಡು ಬಂದು, ವಿಶೇಷವಾದ ರುದ್ರಾಭಿಷೇಕ ಪೂಜೆ ಮತ್ತು ಗಣರಾಧನೆಯನ್ನು ನೆರವೇರಿಸಲಾಯಿತು. ಸಂಜೆ ನಂದಿಕೋಲು ಸೇವೆಯನ್ನು ನೆರವೇರಿಸಿ, ನಂತರ ಬಸವೇಶ್ವರ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ವಿದ್ಯುತ್ ದ್ವೀಪಗಳು ಹಾಗೂ ಹೂಮಾಲೆಗಳಿಂದ ಶೃಂಗರಿಸಲ್ಪಟ್ಟಿದ್ದ ರಥದ ಹಗ್ಗವನ್ನಿಡಿದ ಭಕ್ತರು ಜೈ ಘೋಷಗಳನ್ನು ಮೊಳಗಿಸಿ ಎಳೆದರು.
ದೇವಸ್ಥಾನದಿಂದ ಹೊರಟ ರಥೋತ್ಸವವವು ದೇವರ ಪಾದಗಟ್ಟೆಯನ್ನು ತಲುಪಿ ವಿಶೇಷ ಪೂಜೆ ಸಲ್ಲಿಸಿ, ಹಿಂತುರಿಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಯುವ ಸಮೂಹವು ರಥೋತ್ಸವದುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮಹಿಳೆಯರು ಕಳಸವನ್ನು ಹಿಡಿದು ರಥದಯಿಂದೆ ಹೆಜ್ಜೆ ಹಾಕಿದರು.ಜಾತ್ರೆಯ ನಿಮಿತ್ತ ಮಂದಿರ ಹಾಗೂ ಆಕರ್ಷಕ ವೈಭವದ ರಥೋತ್ಸವಕ್ಕೆ ನೆರೆಯ ಸೈದಾಪುರ, ಬಾಡಿಯಾಲ, ಗೂಡೂರ, ಸಂಗ್ವಾರ, ಮುನಗಲ್ ಯಾದಗಿರಿ ನಗರ ಸೇರಿದಂತೆ ನಾನಾ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.