ಕೊಂಕಣ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಿ ದ್ವಿಪಥಗೊಳಿಸಲು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿ: ಕೇರಳ, ಕರ್ನಾಟಕ, ಗೋವಾ ಮೂಲಕ ಮಹಾರಾಷ್ಟ್ರ ತಲುಪುವ ಕೊಂಕಣ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಿ ದ್ವಿಪಥಗೊಳಿಸಲು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ, ಗೋವಾ ಸರಕಾರಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೂಡ ಸಮ್ಮತಿಸಿದ ಬಗ್ಗೆ ಮಾಹಿತಿ ಇದೆ. ಆದಾಗ್ಯೂ ವಿಲೀನ ವಿಳಂಬವಾಗುತ್ತಿದ್ದು, ಕೊಂಕಣ ರೈಲ್ವೆ ಮಾರ್ಗ ಮತ್ತು ನಿಲ್ದಾಣ ಅಭಿವೃದ್ಧಿಗೆ ತೊಡಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೆ ಏಕಪಥ ಹಳಿ ಹೊಂದಿರುವುದರಿಂದ ಹೊಸ ರೈಲುಗಳನ್ನು ಓಡಿಸಲಾಗದ ಒತ್ತಡವಿದೆ. ಆದ್ದರಿಂದ ತಕ್ಷಣ ಈ ಮಾರ್ಗವನ್ನು ದ್ವಿಪಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈಲ್ವೆ ಹಳಿಗಳ ದ್ವಿಪಥ ಮತ್ತು ಆಧುನಿಕರಣ ಮಾಡಲು ಕೊಂಕಣ ರೈಲ್ವೆ ಅನುದಾನದ ಕೊರತೆ ಅನುಭವಿಸುತ್ತಿದೆ. ಹಾಗೊಂದು ವೇಳೆ ನಿಯಮಗಳು ಮತ್ತು ಸಮನ್ವಯತೆಯ ಗೊಂದಲದಿಂದ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ವಿಳಂಬವಾದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳೂರು, ಮುಂಬೈವರೆಗೆ ಹಳಿಗಳ ದ್ವಿಪಥ ಕಾಮಗಾರಿ ಕೈಗತ್ತಿಕೊಳ್ಳಬೇಕು ಎಂದು ಸಂಸದ ಕೋಟ ಲೋಕಸಭೆಯಲ್ಲಿ ನಿಯಮ 377 ರಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.