ಕೊಂಕಣ ರೈಲ್ವೆಗೆ ಕದ್ರಾದಿಂದ ನೇರ ವಿದ್ಯುತ್ ಪೂರೈಕೆ

| Published : Aug 01 2025, 12:30 AM IST

ಕೊಂಕಣ ರೈಲ್ವೆಗೆ ಕದ್ರಾದಿಂದ ನೇರ ವಿದ್ಯುತ್ ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮುಲ್ಕಿ, ಬಾರ್ಕೂರು, ಕುಂದಾಪುರ ಮುರ್ಡೇಶ್ವರ, ಕುಮಟಾ ಕಾರವಾರ ಹೀಗೆ ವಿದ್ಯುತ್ ಗ್ರಿಡ್‌ಗಳಿಂದ ವಿದ್ಯುತ್ ಸಂಪರ್ಕ ಹೊಂದಲಾಗಿದೆ.

ಕಾರವಾರ: ಕೊಂಕಣ ರೈಲ್ವೆ ಮಾರ್ಗದ ರೈಲುಗಳಿಗೆ ಕೆಪಿಸಿಯಿಂದ ನೇರವಾಗಿ ವಿದ್ಯುತ್ ಒದಗಿಸಲು ನಿರ್ಮಿಸಲಾದ ವಿದ್ಯುತ್ ಗ್ರಿಡ್ ಅನ್ನು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಜಾ ಬುಧವಾರ ಉದ್ಘಾಟಿಸಿದರು.

ರಾಜ್ಯಗಳ ವಿದ್ಯುತ್ ಪೂರೈಕೆ ಕಂಪನಿಗಳಿಂದ ಕೊಂಕಣ ರೈಲ್ವೆ ನಿಗಮವು ವಿದ್ಯುತ್ ಪಡೆಯುತ್ತಿದ್ದು, ರಾಜ್ಯದ ಮುಲ್ಕಿ, ಬಾರ್ಕೂರು, ಕುಂದಾಪುರ ಮುರ್ಡೇಶ್ವರ, ಕುಮಟಾ ಕಾರವಾರ ಹೀಗೆ ವಿದ್ಯುತ್ ಗ್ರಿಡ್‌ಗಳಿಂದ ವಿದ್ಯುತ್ ಸಂಪರ್ಕ ಹೊಂದಲಾಗಿದೆ. ಆದರೆ ಕರ್ನಾಟಕ ಈ ಗ್ರಿಡ್‌ಗಳಲ್ಲಿ ವಿದ್ಯುತ್ ಕೈ ಕೊಟ್ಟರೆ ರೈಲುಗಳ ಓಡಾಟಕ್ಕೆ ಪಕ್ಕದ ಗೋವಾ ರಾಜ್ಯದ ಬಾಳ್ಳಿ ಗ್ರಿಡ್‌ನಿಂದ ವಿದ್ಯುತ್ ಪಡೆಯಬೇಕಿತ್ತು. ಈ ಸಮಸ್ಯೆ ತಪ್ಪಿಸಲು ವಿದ್ಯುತ್ ಉತ್ಪಾದಿಸುವ ಕೆಪಿಸಿಯಿಂದಲೇ ನೇರವಾಗಿ ಪಡೆಯಲು ವಿದ್ಯುತ್ ನಿಗಮವು ಓಪನ್ ಆ್ಯಕ್ಸಿಸ್ ಬಿಲ್ಲಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಕದ್ರಾ ವಿದ್ಯುದಾಗಾರದಿಂದ ನೇರವಾಗಿ 110ಕೆವಿ ವಿದ್ಯುತ್ ಲೈನ್ ಎಳೆದು ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದರಿಂದ ಇನ್ನು ಮುರ್ಡೇಶ್ವರ ಅಥವಾ ಕುಮಟಾ ಮುಂತಾದೆಡೆ ವಿದ್ಯುತ್ ಕೈಕೊಟ್ಟರೆ ಗೋವಾ ರಾಜ್ಯದ ಮೊರೆ ಹೋಗುವ ಅವಶ್ಯಕತೆ ಇಲ್ಲ. ಹೊಸ ಗ್ರಿಡ್‌ನಲ್ಲಿ ವೋಲ್ಟೆಜ್ ಸ್ಥಿರತೆ ಕಾಪಾಡಲು ಆಧುನಿಕ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೇ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಗತ್ಯ ತಂತ್ರಜ್ಞಾನಗಳನ್ನು ಆಳವಡಿಡಲಾಗಿದೆ. ಇದರಿಂದ ಯಾವುದಾದರೂ ಒಂದು ಗ್ರಿಡ್‌ನಲ್ಲಿ ವಿದ್ಯುತ್‌ಕಡಿತವಾದರೂ ರೈಲು ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ. ಈ ವ್ಯವಸ್ಥೆಯಿಂದ ಕೊಂಕಣ ಮಾರ್ಗದಲ್ಲಿ ಇನ್ನೂ ಹೆಚ್ಚಿನ ಸರಕು ಮತ್ತು ಪ್ರಯಾಣಿಕರ ರೈಲುಗಳ ಕಾರ್ಯಚರಣೆಗೆ ಅನುಕೂಲವಾಗಲಿದೆ.ಇದು ಕೊಂಕಣ ರೈಲ್ವೆಗೆ ಹೆಚ್ಚಿನ ಆದಾಯ ತರಲು ಅನುಕೂಲವಾಗಲಿದೆ ಎಂದು ನಿಗಮ ತಿಳಿಸಿದೆ.