ಸಾರಾಂಶ
ಹಳಿಯಾಳ: ಆಮ್ಚೆ ಮೂಳ ಸಿದ್ದಿ ಸಂಸ್ಕೃತಿ ಕಲಾ ತಂಡದ ಮೂಲಕ ಕೊಂಕಣಿ ಭಾಷೆಯನ್ನು ಪ್ರಚಲಿತ ಮಾಡಲು ಕೈಗೊಂಡ ಸೇವೆ ಗುರುತಿಸಿ ಬುಡಕಟ್ಟು ಸಿದ್ದಿ ಕಲಾವಿದೆ ಸೋಬಿನ್ ಮೊತೆಸ್ ಕಾಂಬ್ರೇಕರ ಅವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2024ನೇ ಸಾಲಿನ ಜಾನಪದ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಸೋಬಿನ್ ಮೊತೆಸ್ ಕಾಂಬ್ರೇಕರ ಅವರಿಗೆ ಈಗಾಗಲೇ 2015ರ ಸಾಲಿನ ಜನಪದ ಆಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಯುವ ಪೀಳಿಗೆಗೆ ತರಬೇತಿ:ಹಳಿಯಾಳ ತಾಲೂಕಿನ ಗಾಡಗೇರಾ ಗ್ರಾಮದವರಾದ ಸೋಬಿನ್ ಮೊತೆಸ್ ಕಾಂಬ್ರೇಕರ (65) ಅವರದ್ದು ತುಂಬಿದ ಕುಟುಂಬ. ಅವರಿಗೆ ಪುತ್ರ, ಮೂವರು ಪುತ್ರಿಯರಿದ್ದಾರೆ. ಎಲ್ಲರ ಮದುವೆಯಾಗಿದೆ. ಕೃಷಿ ಕಾಯಕದಲ್ಲಿ ಗಂಡನಿಗೆ ನೆರವಾಗುವ ಸೋಬಿನ್ ಪ್ರತಿನಿತ್ಯವೂ ಸಂಜೆಯ ಸಮಯವನ್ನು ಸಿದ್ದಿ ನೃತ್ಯ ಅಭ್ಯಾಸಕ್ಕಾಗಿ ಹಾಗೂ ಜಾನಪದ ಕೊಂಕಣಿ ಭಾಷೆಯಲ್ಲಿ ಹೊಸ ಹಾಡುಗಳನ್ನು ಯುವಪೀಳಿಗೆಗೆ ಕಲಿಸಲು ಮೀಸಲಾಗಿಡುತ್ತಾರೆ.
2009ರಲ್ಲಿ ಸೋಬಿನ್ ಗಾಡಗೇರಾ ಗ್ರಾಮದ ಜಾನಪದ ಕಲಾವಿದೆ, ಸಾಮಾಜಿಕ ಕಾರ್ಯಕರ್ತೆ ಜ್ಯೂಲಿಯಾನಾ ಅವರ ಜತೆಗೂಡಿ ಗಾಡಗೇರಾ ಗ್ರಾಮದ ಸಿದ್ದಿ ಗೃಹಣಿಯರ ನೃತ್ಯ ಕಲಾ ತಂಡ ಆಮ್ಚೆ ಮೂಳ ಸಿದ್ದಿ ಸಂಸ್ಕೃತಿ ಕಲಾ ತಂಡವನ್ನು ಹುಟ್ಟು ಹಾಕಿದರು. ಸೋಬಿನ್ ಸಿದ್ದಿ ಡಮಾಮಿ ವಾದಕರಾಗಿದ್ದು, ಡಮಾಮಿ ವಾದ್ಯವನ್ನು ನುಡಿಸುವ ಕಲೆಯನ್ನು ತನ್ನ ಸಮುದಾಯದವರಿಗೆ ಕಲಿಸುವ ಜತೆಗೆ ಮರಾಠಿ ಮಿಶ್ರಿತ ಕೊಂಕಣಿ ಮಾತೃಭಾಷೆಯಲ್ಲಿ ಸಿದ್ದಿಗಳ ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಯುವಪೀಳಿಗೆಗೆ ಧಾರೆಯೆರೆಯುತ್ತಿದ್ದಾರೆ. ಮಹಿಳೆಯರ ಹಾಗೂ ಪುರುಷರ ಡಮಾಮಿ ವಾದ್ಯ ಮೇಳ ಆರಂಭಿಸುವ ಜತೆಯಲ್ಲಿ ಹಲವಾರು ಸಿದ್ದಿ ನೃತ್ಯ ಕಲಾತಂಡಗಳನ್ನು ಹುಟ್ಟು ಹಾಕಿದ್ದು, ಅವು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಿವೆ.ಈವರೆಗೆ ಹೈದರಾಬಾದ್, ವಿಶಾಖಪಟ್ಟಣ, ತಂಜಾವುರ, ದೆಹಲಿ, ಕೇರಳ, ಪುಣೆ, ಛತ್ತೀಸ್‌ಗಡ, ಪುದುಚೇರಿ, ಲಕ್ಷದ್ವೀಪ, ಸಿಂಗಾಪುರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ.
ಪ್ರಶಸ್ತಿಗೆ ಆಯ್ಕೆ ಮಾಡಿದ್ದನ್ನು ಕೇಳಿ ನನಗೆ ಹರ್ಷವಾಗಿದೆ. ಕೊಂಕಣಿ ಭಾಷೆಯನ್ನು ಇನ್ನಷ್ಟು ಬೆಳೆಸಲು ಪ್ರಯತ್ನಿಸುವೆ. ಕಾರವಾರ ಧರ್ಮಪ್ರಾಂತ್ಯದ ಮೊದಲ ಬಿಷಪ್ ಡಾ.ವಿಲಿಯಂ ಡಿಮೆಲ್ಲೋ ನಮ್ಮ ಬುಡಕಟ್ಟು ಸಿದ್ದಿ ಸಮುದಾಯವನ್ನು ಮುಖ್ಯವಾಹಿನಿಯಲ್ಲಿ ತರಲು ಕೈಗೊಂಡ ಪ್ರಯತ್ನಗಳು ಯಶಸ್ವಿಯಾಗಿವೆ ಎನ್ನಉ್ತಾರೆ ಸೋಬಿನ್ ಕಾಂಬ್ರೇಕರ.