ಕೊಂಕಣಿ ಸುಸಂಸ್ಕೃತ ಭಾಷೆ: ಗೋವಾ ಸಚಿವ ಗೋವಿಂದ

| Published : Jan 16 2024, 01:51 AM IST / Updated: Jan 16 2024, 03:34 PM IST

Konkani

ಸಾರಾಂಶ

ಬೆಳಗಾವಿ ನಗರದ ಸೆಂಟ್ ಜೇವಿಯರ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೊಂಕಣಿ ಜನೋತ್ಸವ ಕಾರ್ಯಕ್ರಮ ಉದ್ಘಾಟನೆಯಲ್ಲಿ ಗೋವಾ ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಗೋವಿಂದ ಗಾವಡೆ ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೊಂಕಣಿ ಭಾಷೆ ಅತ್ಯಂತ ರಸಭರಿತ, ಸುಸಂಸ್ಕೃತ ಭಾಷೆಯಾಗಿದೆ. ಈ ಭಾಷೆ ತನ್ನದೇ ಆದ ವಿಶಿಷ್ಟ ಗೌರವ ಹೊಂದಿದೆ ಎಂದು ಗೋವಾ ರಾಜ್ಯದ ಕಲೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಗೋವಿಂದ ಗಾವಡೆ ಹೇಳಿದರು.

ನಗರದ ಸೆಂಟ್ ಜೇವಿಯರ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೊಂಕಣಿ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ಇಂದು ಜಾಗತಿಕ ಭಾಷೆಯಾಗಿದ್ದರೂ, ನಾವು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಉಳಿಯಬೇಕಾದರೇ ಪ್ರಾದೇಶಿಕ ಭಾಷೆಗಳನ್ನು ಉಳಿಸಬೇಕು. ಆದ್ದರಿಂದ ಕೊಂಕಣಿಯಂತಹ ಪ್ರಾದೇಶಿಕ ಭಾಷೆಗಳ ಉಳಿವಿಗೆ ಎಲ್ಲರ ಪ್ರಯತ್ನ ಅಗತ್ಯ ಎಂದರು.

ಶಾಸಕ ರಾಜು ಸೇಠ್ ಮಾತನಾಡಿ, ಕೊಂಕಣಿ ಅತ್ಯಂತ ಮಧುರ ಹಾಗೂ ರಸಭರಿತ ಭಾಷೆಯಾಗಿದೆ. ಸೆಂಟ್ ಪಾಲ್ಸ್‌ನಲ್ಲಿ ಓದುತ್ತಿದ್ದಾಗ ಕೊಂಕಣಿ ಭಾಷಿಕ ಗೆಳೆಯರ ಒಡನಾಟದಿಂದ ಭಾಷೆಯ ಬಗ್ಗೆ ಒಲವು ಮೂಡಿತು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಮತ್ತು ಕಾರವಾರ ಬಿಷಪ್ ಡಾ.ಅದು ಡೆರಿಕ್ ಫೆರ್ನಾಂಡಿಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೋನಿಕಾ ಪೀಟರ್ ಡಾಂಟಸ್, ಮಿಲಾಗ್ರಿನ್ ಆಂಡ್ರ್ಯೂ ಡಿಸೋಜಾ.

ಡಾ.ಮನೀಶಾ ಜೇವಿಯರ್ ರೇಗೋ, ಬಾಲಕೃಷ್ಣ ಪೈ, ಗಿರ್ಗೋಲ್ ರೋಡ್ರಿಗಸ್, ಸೈಮನ್ ಲೋಬೋ, ಮ್ಯಾನುಯೆಲ್ ರೋಡ್ರಿಗಸ್, ಮಿನಿನ್ ಗೊನ್ಸಾಲ್ವಿಸ್, ಎಲಿಜಬೆತ್ ರೋಡ್ರಿಗಸ್ ಸೇರಿದಂತೆ ಮೊದಲಾದವು ಭಾಗವಹಿಸಿದ್ದರು.