ಸಾರಾಂಶ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ಮೈಸೂರಿನ ‘ಕೊಂಕಣ್ ಭವನʼದಲ್ಲಿ ನಡೆಯಿತು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ಮೈಸೂರಿನ ‘ಕೊಂಕಣ್ ಭವನʼದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಕೊಂಕಣಿ ಭಾಷೆಯ ಸಾಹಿತ್ಯ, ಕಲೆ ಇನ್ನಷ್ಟು ಬೆಳೆಯಲಿ. ಕೊಂಕಣಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಕೊಡುವಲ್ಲಿ ಸರ್ಕಾರದ ಬಳಿ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ವಹಿಸಿದ್ದರು.
ಹಲವಾರು ಕಥೆ, ಕಾದಂಬರಿ, ಕವನಗಳನ್ನು ಬರೆದು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೆಟ್ರಿಕ್ ಕಾಮಿಲ್ ಮೋರಾಸ್, ವಿವಿಧ ಕೊಂಕಣಿ ಸಂಗೀತ ವಾದ್ಯಗಳಲ್ಲಿ ಪರಿಣತಿ ಪಡೆದು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜೋಯೆಲ್ ಪಿರೇರಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಿದ್ದಿ ಸಂಸ್ಕೃತಿಯನ್ನು ಉಳಿಸಿ ಪಸರಿಸಿದ ಸೊಬೀನಾ ಮೋತೇಶ್ ಕಾಂಬ್ರೆಕರ್ ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಫೆಲ್ಸಿ ಲೋಬೊ ಹಾಗೂ ವಲೇರಿಯನ್ ಸಿಕ್ವೇರಾ ಅವರಿಗೆ ಪುಸ್ತಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಪುರಸ್ಕೃತರ ಪರವಾಗಿ ಜೋಯೆಲ್ ಪಿರೇರಾ ಹಾಗೂ ಫೆಲ್ಸಿ ಲೋಬೊ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಲೇರಿಯನ್ ಡಿಸೋಜ (ವಲ್ಲಿ ವಗ್ಗ), ಕೊಂಕಣಿ ಕ್ರಿಶ್ಚಿಯನ್ ಎಸೋಸಿಯೇಶನ್ ಅಧ್ಯಕ್ಷ ಜೋನ್ ಡಿಸೋಜ ಹಾಗೂ ಕಾರ್ಯದರ್ಶಿ ಜೋಯ್ಸ್ ಸಿಕ್ವೇರಾ ಇದ್ದರು. ಜೋನ್ ಡಿಸೋಜ ವಂದಿಸಿದರು. ಸಪ್ನಾ ಕ್ರಾಸ್ತಾ ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಅಕ್ಷತಾ ನಾಯಕ್ ಇದ್ದರು. ಆಂಟನಿ ಕೀರ್ತನ್ ಜೇಮ್ಸ್ ಮತ್ತು ತಂಡದಿಂದ ಬ್ರಾಸ್ ಬ್ಯಾಂಡ್, ಎಲ್ರೋನ್ ರೊಡ್ರಿಗಸ್ ಮತ್ತು ತಂಡದಿಂದ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.