ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಅಕಾಡೆಮಿ ಸಭಾಂಗಣದಲ್ಲಿ ಶನಿವಾರ ‘ಕಾವ್ಯಾಂ ವ್ಹಾಳೊ-15ʼ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು.
ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕೊಂಕಣಿ ಸಂಗೀತ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ನಾಟಕ ಕ್ಷೇತ್ರದಲ್ಲಿ ಹಾಗೂ ಇತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯದ ವ್ಯಕ್ತಿಗಳನ್ನು ಗುರುತಿಸಿ, ಅವರ ಕಾರ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಾಗಿ ಸನ್ಮಾನಿಸುವ ಕೆಲಸವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದರು.ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ವಿಜಯಲಕ್ಷ್ಮೀ ನಾಯಕ್ ಮಾತಾನಾಡಿ, ಕೊಂಕಣಿ ಒಂದು ಮಹಾನ್ ಭಾಷೆ. ಭಾರತದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಐದು ಲಿಪಿಗಳಲ್ಲಿ ಬರೆಯುವ ಭಾಷೆಯಾಗಿದೆ. ಹಾಗಾಗಿ ಕೊಂಕಣಿ ಭಾಷೆಯು ಬಹಳಷ್ಟು ಅನನ್ಯತೆಯನ್ನು ಹೊಂದಿರುವ ಭಾಷೆಯಾಗಿ ಉಳಿದಿದೆ. ಕೊಂಕಣಿಯು ಭಾರತದ ಸಂವಿಧಾನದ 8 ನೇ ಪರಿಚ್ಛೇದಲ್ಲಿದ್ದು, ಭಾರತದ ಅಧಿಕೃತವಾಗಿ ಮಾನ್ಯತೆ ಪಡೆದ ಭಾಷೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಕೊಂಕಣಿ ಅಕಾಡೆಮಿ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಡೆಪ್ಯೂಟಿ ಚೀಫ್ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ಮಾತನಾಡಿ, ಜಾತಿ ಧರ್ಮ ಮನೆಯಲ್ಲಿರಲಿ, ದೇವರು ಹೃದಯದಲ್ಲಿರಲಿ. ಈ ಜೀವ ಈ ಭೂಮಿಗೆ ಬೆಳಕಾಗಿರಲಿ. ಈ ಲೋಕದಲ್ಲಿ ಜನಿಸಿದ ಮೇಲೆ ಸಮಾಜಕ್ಕೆ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಿ, ಬೇರೆಯವರಿಗೆ ಉಪಕಾರಿಯಾಗಿರಬೇಕೆಂದು ಕರೆಕೊಟ್ಟರು. ಅಕಾಡೆಮಿ ಸದಸ್ಯ ನವೀನ್ ಲೋಬೋ ಇದ್ದರು.ಖ್ಯಾತ ಕವಯಿತ್ರಿ ಫೆಲ್ಸಿ ಲೋಬೊ ದೆರೆಬಯ್ಲ್‌ರ ಕವಿಗೋಷ್ಟಿ ನಡೆಸಿಕೊಟ್ಟರು. ವಲೇರಿಯನ್ ಮೊರಾಸ್ ತಾಕೊಡೆ, ಸ್ಮಿತಾ ಶೆಣೈ, ರೆಮಿ ಕಾಟಿಪಳ್ಳ, ಡಾ.ಫ್ಲಾವಿಯಾ ಕ್ಯಾಸ್ತೆಲಿನೊ, ಅನಿಲ್ ಜೆ. ಕುವೆಲ್ಲೊ, ರಾಧಿಕ ಪೈ, ಪೆದ್ರು ಪ್ರಭು ತಾಕೊಡೆ, ಮರ್ಲಿನ್ ಮಸ್ಕರೇನ್ಹಸ್, ಅಲ್ರೀಶಾ ರೊಡ್ರಿಗಸ್, ಲವೀನ ದಾಂತಿ ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯೆ ಸಪ್ನಾ ಮೇ ಕ್ರಾಸ್ತಾ ನಿರೂಪಿಸಿ, ವಂದಿಸಿದರು.