ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದು ಬಿರಾದಾರ ವಜಾಗೊಳಿಸುವಂತೆ ಆಗ್ರಹಿಸಿ ಕೊಣ್ಣೂರ ಗ್ರಾಮಸ್ಥರು ನಡೆಸಿದ ನಿರಂತರ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಫಲ ದೊರೆತಿದೆ. ಅಧಿಕಾರಿಯನ್ನು ಷರತ್ತುಬದ್ಧ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದು ಬಿರಾದಾರ ವಜಾಗೊಳಿಸುವಂತೆ ಆಗ್ರಹಿಸಿ ಕೊಣ್ಣೂರ ಗ್ರಾಮಸ್ಥರು ನಡೆಸಿದ ನಿರಂತರ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಫಲ ದೊರೆತಿದೆ. ಅಧಿಕಾರಿಯನ್ನು ಷರತ್ತುಬದ್ಧ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ಗ್ರಾಮಸ್ಥರ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರಲ್ಲದೆ ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರ ಹಿನ್ನೆಲೆ ತನಿಖಾ ತಂಡ ರಚಿಸಿ ನೋಟಿಸ್ ಜಾರಿ ಮಾಡಿದ್ದ ಹಿರಿಯ ಅಧಿಕಾರಿಗಳು ಪ್ರಾಥಮಿಕ ತನಿಖೆಯಿಂದ ಕೆಲ ನೂನ್ಯತೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪಿಡಿಓ ಅವರನ್ನು ಷರತ್ತುಬದ್ಧ ಅಮಾನತ್ತು ಗೊಳಿಸಿ ಅದೇಶ ನೀಡಿದ್ದಾರೆ..ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಪ್ಪ ಮಲಗಾಣ ಹಾಗೂ ಮಾಜಿ ಸದಸ್ಯ ರುದ್ರಪ್ಪ ಜಾನಮಟ್ಟಿ ಮಾತನಾಡಿ, ತಪ್ಪುಗಳು ದೃಢಪಟ್ಟಿದ್ದರೂ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು, ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಮಾನತ್ತು ಆದೇಶ ಹೊರಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಸತ್ಯಾಗ್ರಹದಲ್ಲಿ ಭಾಗಿಯಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.