ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ‘ಕೂವಲೆರ ಚಿಟ್ಟಡೆ ಕಪ್ -2025’ರ ವಿನ್ನರ್ಸ್ ಪ್ರಶಸ್ತಿಯನ್ನು ಕತ್ತಣಿರ ತಂಡ ತನ್ನದಾಗಿಸಿಕೊಂಡಿತು. ಈ ಮೂಲಕ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಚೊಚ್ಚಲ ಚಾಂಪಿಯನ್ ಆಗಿ ಕತ್ತಣಿರ ತಂಡ ಹೊರಹೊಮ್ಮಿತು.ಪಂದ್ಯಾವಳಿಯ ವಿನ್ನರ್ಸ್ ಪ್ರಶಸ್ತಿ ಪಡೆಯುವ ಹೆಗ್ಗುರಿಯೊಂದಿಗೆ ಫೈನಲ್ ಪ್ರವೇಶಿಸಿದ ಗುಂಡಿಕೆರೆಯ ಮೀತಲತಂಡ (ಎ) ತಂಡ ಪ್ರಬಲ ಹೋರಾಟ ನಡೆಸಿದರೂ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಕೊಡಗಿನ ವಾಲಿಬಾಲ್ ಕ್ರೀಡೆಯಲ್ಲಿ ಬಲಿಷ್ಠ ತಂಡವೆಂದೇ ಪ್ರಸಿದ್ಧಿ ಪಡೆದ ಮೀತಲತಂಡ (ಎ) ಕುಟುಂಬ ತಂಡ ಕತ್ತಣಿರ ತಂಡದ ಎದುರು ಶರಣಾಗಿ ರನ್ನರ್ಸ್ ಪ್ರಶಸ್ತಿಗೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರೊಂದಿಗೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಅಲ್ಲಿನ ಜುಮಾ ಮಸೀದಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗೆ ವರ್ಣ ರಂಜಿತ ತೆರೆ ಬಿತ್ತು.
ಸೋಮವಾರ ಬೆಳಗಿನ ಜಾವ 3:30ರ ವರೆಗೆ ನಡೆದ ಬಲಿಷ್ಠ ಎರಡು ತಂಡಗಳ ನಡುವಿನ ರೋಚಕ ಫೈನಲ್ ಪಂದ್ಯವನ್ನು ಅಬಾಲವೃದ್ಧರಾಗಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಪ್ರೇಕ್ಷಕರು ಚಳಿಯನ್ನೂ ಲೆಕ್ಕಿಸದೆ ಕಣ್ತುಂಬಿಕೊಂಡು ಸಂಭ್ರಮಿಸಿದರು. ಎರಡು ತಂಡಗಳಿಗೂ ಸಮಬಲದ ಪ್ರೇಕ್ಷಕರ ಬೆಂಬಲ ಪಂದ್ಯದುದ್ದಕ್ಕೂ ಕಂಡು ಬಂತು. ಕೊನೆಗೂ ಕತ್ತಣಿರ ತಂಡ ವಿಜಯದ ಮಾಲೆಯನ್ನು ತನ್ನದಾಗಿಸಿಕೊಳ್ಳುತ್ತಿದ್ದಂತೆ ಅಂಕಣಕ್ಕೆ ಧಾವಿಸಿ ಬಂದ ಪ್ರೇಕ್ಷಕ ಸಮೂಹ ವಿಜೇತ ಆಟಗಾರರನ್ನು ಅಪ್ಪಿಕೊಂಡು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.ಪ್ರೇಕ್ಷಕರ ನಿರಂತರವಾದ ಶಿಳ್ಳೆ ಚಪ್ಪಾಳೆಗಳ ನಡುವೆ ತಡರಾತ್ರಿ ಆರಂಭಗೊಂಡ ಫೈನಲ್ ಪಂದ್ಯಕ್ಕೆ ಬಲಿಷ್ಠ ತಂಡಗಳಾದ ಕತ್ತಣಿರ ಮತ್ತು ಮೀತಲತಂಡ (ಎ) ತೀವ್ರ ಭರವಸೆಯೊಂದಿಗೆ ಅಂಕಣಕ್ಕೆ ಇಳಿಯಿತು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಕತ್ತಣಿರ ತಂಡ ಎದುರಾಳಿ ತಂಡಕ್ಕೆ ತೀವ್ರ ಸ್ಪರ್ಧೆಯೊಡ್ಡಿತು. ಅಷ್ಟೇ ತೀವ್ರತೆಯಿಂದ ಪ್ರತಿರೋಧ ತೋರಿದ ಮೀತಲತಂಡ (ಎ) ತಂಡ ಕತ್ತಣಿರ ತಂಡಕ್ಕೆ ನಿರಂತರವಾಗಿ ಸವಾಲೆಸೆಯುತ್ತಲೇ ಬಂತು. ಅಷ್ಟೇ ತೀವ್ರತೆಯಿಂದ ಪ್ರತಿ ಸವಾಲು ಹಾಕುತ್ತಿದ್ದ ಕತ್ತಣಿರ ತಂಡದ ಬಲಿಷ್ಠ ಆಟಗಾರ ಅಂದಾಯಿ ಮೀತಲತಂಡ(ಎ) ತಂಡದ ಹೆಗ್ಗುರಿಗೆ ತಡೆಗೋಡೆಯಾಗಿ ನಿಂತು ತಮ್ಮ ತಂಡದ ಅಂಕ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದರಿಂದಾಗಿ ಮೊದಲ ಸೆಟ್ಟಿನಲ್ಲಿ ಕತ್ತಣಿರ ತಂಡ ಮೇಲುಗೈ ಸಾಧಿಸಿತು.
2ನೇ ಸೆಟ್ ಆರಂಭಗೊಳ್ಳುತ್ತಿದ್ದಂತೆ ಮತ್ತಷ್ಟು ಸಂಘಟಿತ ಆಟಕ್ಕೆ ಒತ್ತು ನೀಡಿದ ಮೀತಲತಂಡ (ಎ) ತಂಡ ಸೇಡು ತೀರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿತ್ತು. ಮೀತಲತಂಡ (ಎ) ತಂಡದ ಬಲಿಷ್ಠ ಆಟಗಾರರಾದ ಶಿಹಾಬ್ ಮತ್ತು ಗಫೂರ್ ಸಾಕಷ್ಟು ಪ್ರಯತ್ನಗಳ ಮೂಲಕ ತಂಡದ ಅಂಕಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರಿಂದಾಗಿ 2ನೇ ಸೆಟ್ ನಲ್ಲಿ ಮೀತಲತಂಡ (ಎ)ತಂಡ ಗೆಲುವು ಸಾಧಿಸಿತು. ಇದರಿಂದಾಗಿ 3ನೇ ಸೆಟ್ಟಿನಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬ ಧೋರಣೆಯೊಂದಿಗೆ ಆಟ ಆರಂಭಿಸಿದ ಕತ್ತಣಿರ ತಂಡದ ಬಲಿಷ್ಠ ಆಟಗಾರರಾದ ಅಂದಾಯಿ ಮತ್ತು ಬಶೀರ್ ಪ್ರಶಸ್ತಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎದುರಾಳಿ ತಂಡದ ವಿರುದ್ಧ ಚೆಂಡಿನ ಪ್ರಯೋಗ ನಡೆಸಿದರು. ಹೀಗಾಗಿ 3ನೇ ಸೆಟ್ ನಲ್ಲಿ ಮತ್ತೊಮ್ಮೆ ಕತ್ತಣಿರ ತಂಡ ಮೇಲುಗೈ ಸಾಧಿಸಿದ್ದರಿಂದ ವಿಜಯದ ಹಾದಿ ಸುಗಮಗೊಂಡಿತು. ಪಂದ್ಯಾವಳಿಯ ತೃತೀಯ ಸ್ಥಾನವನ್ನು ಅತಿಥೇಯ ಚಿಟ್ಟಡೆ ಕೂವಲೆರ (ಎ) ತಂಡ ಪಡೆದುಕೊಂಡರೆ 4ನೇ ಸ್ಥಾನವನ್ನು ಕನ್ನಡಿಯಂಡ (ಎ) ತಂಡ ಗಳಿಸಿತು.ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ನಲ್ಲಿ ಕತ್ತಣಿರ ತಂಡ ಕನ್ನಡಿಯಂಡ (ಎ) ತಂಡವನ್ನು 2-0 ನೇರ ಸೆಟ್ಟುಗಳಿಂದ ಮಣಿಸಿತು. 2ನೇ ಸೆಮಿ ಫೈನಲ್ ನಲ್ಲಿ ಮೀತಲತಂಡ (ಎ)ತಂಡವು ಅತಿಥೇಯ ಚಿಟ್ಟಡೆ ಕೂವಲೆರ (ಎ) ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕತ್ತಣಿರ ತಂಡವು ಕೂರುಳಿಕಾರಂಡ ತಂಡವನ್ನು 2-0ನೇರ ಸೆಟ್ಟ್ ಗಳಿಂದ, ಮೀತಲತಂಡ (ಎ) ತಂಡ ಚೆಂಬಾರಂಡ ತಂಡವನ್ನು 2-1 ಸೆಟ್ಟುಗಳಿಂದ, ಕನ್ನಡಿಯಂಡ (ಎ)ತಂಡ ಕುಂಡಂಡ ತಂಡವನ್ನು 2-1 ಸೆಟ್ಟುಗಳಿಂದ ಮತ್ತು ಅತಿಥೇಯ ಚಿಟ್ಟಡೆ ಕೂವಲೆರ (ಎ) ತಂಡವು ಚಿಟ್ಟಡೆ ಎರಟೇಂಡ(ಎ) ತಂಡವನ್ನು 2-1 ಸೆಟ್ ಗಳಿಂದ ಪರಾಭವಗೊಳಿಸಿ ಮುಂದಿನ ಹಂತ ಪ್ರವೇಶಿಸಿತು. ಆರಂಭದಲ್ಲಿ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೂರುಳಿಕಾರಂಡ ತಂಡ ಪೊಟ್ಟಂಡ ತಂಡವನ್ನು, ಮೀತಲತಂಡ (ಎ) ತಂಡ ಚಿಟ್ಟಡೆ ಕೂವಲೆರ (ಬಿ) ತಂಡವನ್ನು, ಕತ್ತಣಿರ ತಂಡ ಹರಿಶ್ಚಂದ್ರ ತಂಡವನ್ನು, ಚೆಂಬಾರಂಡ ತಂಡ ಬಲ್ಯತ್ ಕಾರಂಡ ತಂಡವನ್ನು ಮಣಿಸಿದರೆ, ಕುಂಡಂಡ ತಂಡ ಪರವಂಡ ತಂಡವನ್ನು, ಚಿಟ್ಟಡೆ ಕೂವಲೆರ (ಎ) ತಂಡ ಕಂಬೇರ ತಂಡವನ್ನು ಹಾಗೂ ಕನ್ನಡಿಯಂಡ (ಎ) ತಂಡ ಕಾಳೆರ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದುಕೊಂಡಿತ್ತು.
ಪಂದ್ಯಾವಳಿಯ ಬೆಸ್ಟ್ ಆಲ್ ರೌಂಡರ್ ಆಟಗಾರ ಪ್ರಶಸ್ತಿಯನ್ನು ಮೀತಲತಂಡ ತಂಡದ ಸಿಹಾಬ್ ಗಳಿಸಿದರೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಕತ್ತಣ್ಣಿರ ತಂಡದ ಅಂದಾಯಿ, ಬೆಸ್ಟ್ ಪಾಸ್ಸರ್ ಪ್ರಶಸ್ತಿಯನ್ನು ಅದೇ ತಂಡದ ಬಶೀರ್ ಪಡೆದುಕೊಂಡರು. ಬೆಸ್ಟ್ ಬ್ಲೋಕರ್ ಪ್ರಶಸ್ತಿಯನ್ನು ಮೀತಲತಂಡ ತಂಡದ ಗಪೂರ್ ತನ್ನದಾಗಿಸಿಕೊಂಡರೆ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಕತ್ತಣಿರ ತಂಡದ ಸರ್ಫು ಪಡೆದುಕೊಂಡರು. ಪಂದ್ಯಾವಳಿಯ ಅತ್ಯುತ್ತಮ ಶಿಸ್ತುಬದ್ಧ ತಂಡದ ಪ್ರಶಸ್ತಿಯನ್ನು ಕಂಡಂಗಾಲದ ಮಂದಮಾಡ ತಂಡ ಗಳಿಸಿತು. ವಿಜೇತ ತಂಡಗಳಿಗೆ ಕೆಎಂಎ ವಿನ್ನರ್ಸ್ ರೋಲಿಂಗ್ ಟ್ರೋಫಿ ಸೇರಿದಂತೆ ಚಿಟ್ಟಡೆ ಕೂವಲೆರ ಕಪ್-2025 ಅನ್ನು ಹಾಗೂ ವಿಶೇಷ ಪ್ರಶಸ್ತಿ ಪಡೆದ ಆಟಗಾರರಿಗೆ ಪಾರಿತೋಷಕವನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡಾಕೂಟಗಳು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಕ್ರೀಡಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದೊಂದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕೆಎಂಎ ಕೋಶಾಧಿಕಾರಿ ಹೆಚ್. ಎ. ಹಂಸ, ಗೋಣಿಕೊಪ್ಪಲು ಎಪಿಎಂಸಿ ಮಾಜಿ ಅಧ್ಯಕ್ಷರಾದ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ನಾಸರ್, ಸ್ಥಳೀಯ ಗ್ರಾ. ಪಂ. ಸದಸ್ಯರಾದ ಸನ್ನು ಚಂಗಪ್ಪ, ಪ್ರಮುಖರಾದ ಚೆಪ್ಪುಡೀರ ರಾಕೇಶ್, ಮೇಕೇರಿರ ಬೋಪಣ್ಣ ಮೊದಲಾದವರು ಪಾಲ್ಗೊಂಡಿದ್ದರು. ಚಿಟ್ಟಡೆ ಕೂವಲೆರ ಕುಟುಂಬದ ಅಧ್ಯಕ್ಷರಾದ ಉಮ್ಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ, ಶಾಸಕ ಎ.ಎಸ್. ಪೊನ್ನಣ್ಣ ಅವರು ಪಂದ್ಯಾವಳಿಯ ಫೈನಲ್ ಆರಂಭಕ್ಕೂ ಮುನ್ನ ಚಿಟ್ಟಡೆಗೆ ಆಗಮಿಸಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ಸಂಘಟಿಸಿದ ಆಯೋಜಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಆಟಗಾರರನ್ನು ಹುರಿದುಂಬಿಸಿ ಫೈನಲ್ ಪಂದ್ಯಾವಳಿಗೆ ಶುಭ ಕೋರಿದರು. ಈ ವೇಳೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಪಿ. ಎ. ಹನೀಫ್, ಕಾಂಗ್ರೆಸ್ ಪ್ರಮುಖರಾದ ಇಸ್ಮಾಯಿಲ್, ಮೀದೇರಿರ ನವೀನ್, ಕೋಳುಮಂಡ ರಫೀಕ್, ಅಶ್ರಫ್, ರಫಿ ಮೊದಲಾದವರು ಉಪಸ್ಥಿತರಿದ್ದರು.ಚಿಟ್ಟಡೆ ಕೂವಲೆರ ಕುಟುಂಬದ ಕಾರ್ಯದರ್ಶಿ ಕೂವಲೆರ ಫಕ್ರುದ್ದೀನ್, ತಾಂತ್ರಿಕ ಸಮಿತಿ ಮುಖ್ಯಸ್ಥರಾದ ಕೂವಲೆರ ಪೈಜ್ಹು ಸಜೀರ್, ಕೂವಲೆರ ಅಬ್ದುಲ್ ಘನಿ ಸೇರಿದಂತೆ ಕೂವಲೆರ ಕುಟುಂಬಸ್ಥರು ಮೂರು ದಿನಗಳ ಪಂದ್ಯಾವಳಿಯ ಯಶಸ್ವಿಗಾಗಿ ಶ್ರಮಿಸಿದ್ದರು. ಕೇರಳದಿಂದ ಆಗಮಿಸಿದ್ದ ನುರಿತ ವಾಲಿಬಾಲ್ ತೀರ್ಪುಗಾರರಾದ ಸುನಿಲ್, ರಿಯಾಜ್ ಮತ್ತು ಸಜಿತ್ ಪಂದ್ಯಾವಳಿಯನ್ನು ನಡೆಸಿಕೊಟ್ಟರು. ಎಡಪಾಲದ ಎರಟೇಂಡ ಜಂಶೀರ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು.
ಮುಂದಿನ ವರ್ಷ ಮೀತಲತಂಡ ಕಪ್ಮುಂದಿನ ವರ್ಷ ನಡೆಯಲಿರುವ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಆತಿಥ್ಯವನ್ನು ಗುಂಡಿಕೆರೆಯ ಮೀತಲತಂಡ ಕುಟುಂಬ ವಹಿಸಿಕೊಂಡಿದೆ.ಜಿಲ್ಲೆಯಲ್ಲಿ ಬಲಿಷ್ಠ ಕೌಟುಂಬಿಕ ವಾಲಿಬಾಲ್ ತಂಡವನ್ನು ಹೊಂದಿರುವ ಮೀತಲತಂಡ ಕುಟುಂಬಸ್ಥರಿಗೆ ಸೋಮವಾರ ಬೆಳಗಿನ ಜಾವ ನಡೆದ ಚಿಟ್ಟಡೆ ಕೂವಲೆರ ಕಪ್-2025ರ ಸಮಾರೋಪ ಸಮಾರಂಭದಲ್ಲಿ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯ ಧ್ವಜವನ್ನು ಹಸ್ತಾಂತರಿಸಲಾಯಿತು. ಮೀತಲತಂಡ ಕುಟುಂಬದ ಪರವಾಗಿ ಎಂ. ಎಂ. ಇಸ್ಮಾಯಿಲ್, ಎಂ.ಎ. ಹಮೀದ್, ಎಂ. ಎಸ್. ಬಶೀರ್, ಎಂ.ಎಂ. ರಜಾಕ್, ಎಂ. ಬಿ. ಬಶೀರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕುಟುಂಬಸ್ಥರು ಧ್ವಜವನ್ನು ಸ್ವೀಕರಿಸಿದರು.
;Resize=(128,128))
;Resize=(128,128))