ಸಾರಾಂಶ
ಕೊಪ್ಪ, ಮುಡಾ ಹಗರಣದಲ್ಲಿ ಭಾಗಿಯಾದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೊಪ್ಪ ಮಂಡಲದ ಬಿಜೆಪಿ ಕಾರ್ಯಕರ್ತರು ಸೋಮವಾರ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಕೊಪ್ಪ
ಮುಡಾ ಹಗರಣದಲ್ಲಿ ಭಾಗಿಯಾದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೊಪ್ಪ ಮಂಡಲದ ಬಿಜೆಪಿ ಕಾರ್ಯಕರ್ತರು ಸೋಮವಾರ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ಭ್ರಷ್ಟಾಚಾರದ ಪಿತಾಮಹ ಎಂದು ಈ ರಾಜ್ಯದಲ್ಲಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊರತು ಮತ್ಯಾರು ಅಲ್ಲ ಎಂದರು. ಮುಡಾ ಹಗರಣದಲ್ಲಿ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಈಗಾಗಲೇ ಅನುಮತಿ ನೀಡಿದ್ದಾರೆ. ತಕ್ಷಣವೇ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಂಡಲ ಅಧ್ಯಕ್ಷ ದಿನೇಶ್ ಮಾತನಾಡಿ ಸಮಾಜವಾದಿ ಎನ್ನುತ್ತಿದ್ದ ಸಿದ್ಧರಾಮಯ್ಯ ಈಗ ಮಜಾವಾದಿಯಾಗಿದ್ದಾರೆ. ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಿ ಮುಕ್ತವಾಗಿ ತನಿಖೆ ನಡೆಸಲು ಅನುವು ಮಾಡಿಕೊಡಲಿ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ ಭ್ರಷ್ಟಾಚಾರ ರಹಿತ ಆಡಳಿತ ಎನ್ನುತ್ತಿದ್ದ ಸಿದ್ಧರಾಮಯ್ಯ ಈಗ ತಾವೇ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿದ್ದಾರೆ. ಹೈಕಮಾಂಡ್ ಜೇಬು ತುಂಬಿಸಲು ವಾಲ್ಮೀಕಿ ನಿಗಮದ ದಲಿತರ ಹಣ ಲೂಟಿ ಹೊಡೆಯುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಿದೆ ಎಂದು ಒಂದು ಕ್ಷಣವೂ ತಡಮಾಡದೇ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸಭೆಯಲ್ಲಿ ಮಂಡಲ ಉಪಾಧ್ಯಕ್ಷ ಜಯಂತ್ ಕಾರ್ಯದರ್ಶಿ ಬಿಷೇಜ್ ಭಟ್ ಮತ್ತು ಅರುಣ್ ಶಿವಪುರ, ನಗರ ಘಟಕದ ಅಧ್ಯಕ್ಷ ಎ. ದಿವಾಕರ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸಿ.ಎಚ್., ಮಹಿಳಾ ಮೊರ್ಚಾ ಪದ್ಮಾವತಿ ರಮೇಶ್, ಲಲಿತ ನಾಗೇಂದ್ರ, ಪಪಂ ಸದಸ್ಯರಾದ ಇದಿನಬ್ಬ ಇಸ್ಮಾಯಿಲ್, ಗಾಯತ್ರಿ ಶೆಟ್ಟಿ, ರೇಖಾ, ಸುಜಾತ ವಸಂತ್, ಮುಖಂಡರಾದ ಉದಯಕುಮಾರ್ ಜೈನ್, ಉಮೇಶ್ ಶೇಟ್, ಕಿಶೋರ್ ಪೆಜಾವರ್, ವೆಂಕಟೇಶ್ ವಿಜಯಕುಮಾರ್, ಯುವಮೊರ್ಚಾ ಅಧ್ಯಕ್ಷ ಶರತ್ ನಿಲುವಾಗಿಲು, ಮಂಜುನಾಥ್ ಕಾರ್ಬೈಲ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.