ಸಾರಾಂಶ
ಕಳೆದ ಬಾರಿ ಮಲೆನಾಡಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಸುರಿದ ಪರಿಣಾಮ ತಾಲೂಕಿ ನಾದ್ಯಂತ ಬರದ ಛಾಯೆ ಆವರಿಸಿದ್ದು, ಮಲೆನಾಡಿನಲ್ಲೂ ಬಯಲುಸೀಮೆ ವಾತಾವರಣ ಸೃಷ್ಟಿಯಾಗಿದೆ. ಅಂತರ್ಜಲ ಕೊರತೆಯಿಂದ ಬಾವಿ, ಬೋರ್, ಹಳ್ಳಕೊಳ್ಳಗಳ ನೀರು ಬತ್ತಿ ಹೋಗುತ್ತಿದೆ. ಪಪಂ ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ಎಂದಿನಂತೆ ನೀರು ಪೂರೈಕೆ ಸಾಧ್ಯವಾಗದೆ ೨-೩ ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಮಲೆನಾಡಿನಲ್ಲೂ ಬಯಲುಸೀಮೆ ವಾತಾವರಣ ಸೃಷ್ಟಿ । ಅಂತರ್ಜಲ ಕೊರತೆಗೆ ಬತ್ತಿದ ಬಾವಿ, ಬೋರ್, ಹಳ್ಳಕೊಳ್ಳ
ಹಮೀದ್ ಕೊಪ್ಪಕನ್ನಡಪ್ರಭ ವಾರ್ತೆ, ಕೊಪ್ಪ
ಕಳೆದ ಬಾರಿ ಮಲೆನಾಡಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಸುರಿದ ಪರಿಣಾಮ ತಾಲೂಕಿ ನಾದ್ಯಂತ ಬರದ ಛಾಯೆ ಆವರಿಸಿದ್ದು, ಮಲೆನಾಡಿನಲ್ಲೂ ಬಯಲುಸೀಮೆ ವಾತಾವರಣ ಸೃಷ್ಟಿಯಾಗಿದೆ. ಅಂತರ್ಜಲ ಕೊರತೆಯಿಂದ ಬಾವಿ, ಬೋರ್, ಹಳ್ಳಕೊಳ್ಳಗಳ ನೀರು ಬತ್ತಿ ಹೋಗುತ್ತಿದೆ. ಪಪಂ ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ಎಂದಿನಂತೆ ನೀರು ಪೂರೈಕೆ ಸಾಧ್ಯವಾಗದೆ ೨-೩ ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ಭಂಡಿಗಡಿ ಗ್ರಾಪಂ ನಲ್ಲಿಯೂ ಕೆರೆ ನೀರನ್ನು ಕುಡಿಯಲು ಬಳಸದೆ ಇರುವುದರಿಂದ ತುಂಗಾ ನದಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವೊಮ್ಮೆ ೨-೩ ದಿನಗಳ ಕಾಲ ವಿದ್ಯುತ್ ತೊಂದರೆ ಯುಂಟಾಗಿದ್ದು ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಗ್ರಾಪಂನವರು ಟ್ಯಾಂಕರ್ ಮುಖೇನ ಮನೆಮನೆಗೂ ಕುಡಿಯುವ ನೀರನ್ನು ಸರಬರಾಜು ಮಾಡಿದ್ದರು. ಈ ಭಾಗದಲ್ಲೂ ಬಾವಿಗಳ ನೀರಿನ ಪ್ರಮಾಣ ಕಡಿಮೆ ಯಾಗುತ್ತಿದ್ದು ೨-೩ ವಾರಗಳ ಕಾಲ ಮಳೆ ಬಾರದೆ ಇದ್ದಲ್ಲಿ ಬಾವಿಗಳ ನೀರು ಸಂಪೂರ್ಣ ಬತ್ತಿ ಹೋಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬ್ರಿಟೀಷರ ಕಾಲದಿಂದಲೂ ಕೊಪ್ಪ ಪಟ್ಟಣಿಗರಿಗೆ ನೀರುಣಿಸುತ್ತಿದ್ದ ಐತಿಹಾಸಿಕ ಹಾಲ್ಗಾರು ಹುಚ್ಚುರಾಯರ ಕೆರೆ ಆಗಿನ ಹಿರಿಕೆರೆಯಲ್ಲಿ ಕಡಿಮೆ ಮಳೆ ಪ್ರಮಾಣದಿಂದ ಈ ವರ್ಷ ಕೆರೆ ಕೋಡಿ ಹರಿದಿರಲಿಲ್ಲ. ಏಪ್ರಿಲ್, ಮೇವರೆಗೂ ಹಿರಿಕೆರೆಯಿಂದಲೇ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ಕೆರೆ ನೀರು ಬತ್ತಿ ತಳ ಸೇರಿದೆ. ತುಂಗಾನದಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದ್ದು ಕೊಪ್ಪ ಪಪಂ ಮತ್ತು ಕೊಪ್ಪ ಗ್ರಾಮಾಂತರ ಪಂಚಾಯಿತಿ ಕೆಲವು ಭಾಗ ಸೇರಿದಂತೆ ಸರಿಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪಪಂ ನಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬಹುದಾದ ಕೆಸುವಿನ ಕೆರೆ ಯೋಜನೆ ಕಾಮಗಾರಿ ನಡೆದಿದ್ದರೂ ಪಕ್ಷ ರಾಜಕಾರಣಕ್ಕೆ ಸಿಲುಕಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದೆ. ೨-೩ ದಿನಗಳಿಗೊಮ್ಮೆ ಪಪಂ ಹಾಗೂ ಗ್ರಾಮಾಂತರ ಗ್ರಾಪಂಯ ಕೆಲವು ಪ್ರದೇಶಗಳಿಗೆ ಪಪಂ ಪೈಪ್ ಲೈನ್‌ನಿಂದ ನೀರು ಸರಬರಾಜಾಗುತ್ತಿದ್ದು ಮಳೆ ಬಾರದೆ ಹೋದಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಪ್ರಥಮ ಬಾರಿ ಎಂಬುವಂತೆ ಮಲೆನಾಡು ಭಾಗದಲ್ಲಿ ಈ ಬಾರಿ ಬಿಸಿಲಿನ ತೀವ್ರತೆ ಅಧಿಕವಾಗಿದ್ದು ನೀರು ಬೇಗನೆ ಬತ್ತಿಹೋಗುವ ಸಾಧ್ಯತೆಗಳಿವೆ ಎಂದಿರುವ ಪ.ಪಂ ಸದಸ್ಯ ಇದ್ದೀನಬ್ಬ ನೀರನ್ನು ಮಿತವಾಗಿ ಬಳಸುವಂತೆ ವಿನಂತಿಸಿದ್ದಾರೆ.