ಕೊಪ್ಪ: ತೆರದ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು

| Published : Dec 12 2024, 12:32 AM IST

ಸಾರಾಂಶ

ಕೊಪ್ಪ, ಪಟ್ಟಣದ ಹೊರ ವಲಯದಲ್ಲಿರುವ ಅಮ್ಮಡಿ ಎಸ್ಟೇಟ್‌ನಲ್ಲಿ ತೆರದ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ, ಕೊಪ್ಪ

ಪಟ್ಟಣದ ಹೊರ ವಲಯದಲ್ಲಿರುವ ಅಮ್ಮಡಿ ಎಸ್ಟೇಟ್‌ನಲ್ಲಿ ತೆರದ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಅಮ್ಮಡಿ ಎಸ್ಟೇಟ್ ಮೂರನೇ ಗೇಟ್‌ನ ಲೈನ್ ಮನೆಯಲ್ಲಿ ವಾಸವಿದ್ದ ಮಧ್ಯಪ್ರದೇಶ ಮೂಲದ ಸುನೀತಾ ಅವರ ಮಕ್ಕಳಾದ ಸೀಮಾ ( 6) ಹಾಗೂ ರಾಧಿಕಾ (2) ಎಸ್ಟೇಟ್‌ನಲ್ಲಿ ಆಟವಾಡಲು ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.

ಮಕ್ಕಳನ್ನ ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ 4 ಗಂಟೆ ಹಿಂದಿರುಗಿದಾಗ ಮಕ್ಕಳು ಕಾಣಿಸಲಿಲ್ಲ. ಆಗ ಎಸ್ಟೇಟ್‌ನಲ್ಲಿ ಕಾರ್ಮಿಕರು ಹುಡುಕಲು ಆರಂಭಿಸಿದ್ದಾರೆ. ರಾತ್ರಿ ಎಂಟು ಗಂಟೆ ಸಮಯಕ್ಕೆ ಮಕ್ಕಳು ಬಾವಿಗೆ ಬಿದ್ದು ಮೃತರಾಗಿರುವುದು ತಿಳಿದಿದೆ. ಸ್ಥಳಕ್ಕೆ ಬಂದ ಆಗ್ನಿ ಶಾಮಕ ದಳದ ಸಿಬ್ಬಂದಿ ಬಾವಿಯಿಂದ ಮಕ್ಕಳನ್ನು ಮೇಲಕ್ಕೆ ಎತ್ತಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಎಮ್.ಒ. ಜೋಸ್, ರಾಜು ಮೊಗವೀರ, ಗುರುನಾಥ ಲಮಾಣಿ, ಮಲ್ಲೇಶ ಹೊಟ್ಟಿ, ಮನೊಹರ ರಾಠೋಡ್, ಚಾಲಕ ವಿಶ್ವನಾಥ ಲೋಗಾವಿ ಮುಂತಾದವರಿದ್ದರು.

ವಲಸೆ ಕಾರ್ಮಿಕರು ಪ್ರತೀ ವರ್ಷ ಕೂಲಿ ಕೆಲಸಕ್ಕೆ ಬರುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರುತ್ತಾರೆ. ಕಳೆದ ವರ್ಷ ಪೋಷಕರ ಅಜಾಗರೂಕತೆಯಿಂದ ಇಬ್ಬರು ಮಕ್ಕಳು ಬೇಲಿಯಲ್ಲಿರುವ ಕಳ್ಳಿ ಕಾಯಿ ತಿಂದು ಅಸ್ವಸ್ಥರಾಗಿದ್ದರು. ಇವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ಗಮನಿಸಿದ ಕೊಪ್ಪ ರೋಟರಿ ಕ್ಲಬ್ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಿ ಶುಚಿತ್ವದ ಬಗ್ಗೆ ಅರಿವು ನೀಡಿ ಔಷಧಿ, ಬಟ್ಟೆಗಳನ್ನುದೊದಗಿಸಿ ಮಕ್ಕಳ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದ್ದರು. ಇಂತಹ ಘಟನೆ ಮತ್ತೆ ಮುಂದೆ ಘಟಿಸದಿರಲಿ ಎಂದು ರೋಟರಿ ಸಂಸ್ಥೆ ತಿಳಿಸಿದೆ.