ಇಂದು ಕೊಪ್ಪಳ ಬಂದ್, ಪೂರ್ವಭಾವಿ ಸಭೆ: ಹಲವು ಸಂಘಟನೆಗಳ ಬೆಂಬಲ

| Published : Jan 06 2025, 01:00 AM IST

ಇಂದು ಕೊಪ್ಪಳ ಬಂದ್, ಪೂರ್ವಭಾವಿ ಸಭೆ: ಹಲವು ಸಂಘಟನೆಗಳ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಜ. 6ರಂದು ಕೊಪ್ಪಳ ಬಂದ್‌ಗೆ ಕರೆ ನೀಡಿವೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಜ. 6ರಂದು ಕೊಪ್ಪಳ ಬಂದ್‌ಗೆ ಕರೆ ನೀಡಿವೆ.

ಗೃಹ ಸಚಿವರು ದೇಶದ ಜನರ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಸರ್ಕಾರ ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಕೇಂದ್ರದ ಎಲ್ಲ ಸಂಘಟನೆಗಳಿಗೂ ಸಹ ಬಂದ್‌ಗೆ ಬೆಂಬಲಿಸುವಂತೆ ಕೋರಲಾಗಿದೆ. ಬಂಡಿ ಹಮಾಲರ ಸಂಘ, ಆಟೋ ಚಾಲಕರ ಸಂಘ, ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳ ಸಂಘ ಸೇರಿದಂತೆ ಎಲ್ಲ ರೀತಿಯ ಸಂಘಟನೆಗಳನ್ನು ಸಹ ಬಂದ್ ಗೆ ಬೆಂಬಲ ನೀಡುವಂತೆ ಕೋರಲಾಗಿದೆ.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 7 ಗಂಟೆಗೆ ಪ್ರತಿಭಟನಾಕಾರರು ಜಮಾಯಿಸಲಿದ್ದಾರೆ. ಸುಮಾರು 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ ಈ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ.ತಾಲೂಕು ಕ್ರೀಡಾಂಗಣದಲ್ಲಿ ಜಮಾಯಿಸಿ, ಅಲ್ಲಿಂದ ನಗರದ ವಿವಿಧೆಡೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಳಿಕ ಮನವಿ ಸಲ್ಲಿಸಲಾಗುವುದು.

ಜಿಲ್ಲೆಯ ತಾಲೂಕು ಕೇಂದ್ರಗಳಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜನರನ್ನು ಕರೆತರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಬಂದಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.ಶಾಲಾ-ಕಾಲೇಜಿಗೂ ರಜೆಗೆ ಮನವಿ

ಶಾಲೆ ಹಾಗೂ ಕಾಲೇಜುಗಳಿಗೂ ರಜೆ ನೀಡುವಂತೆಯೂ ಕೋರಲಾಗಿದೆ. ಪ್ರತಿಭಟನೆಯ ವೇಳೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಿಂದ ಮನವಿ ಮಾಡಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.ಪೂರ್ವಭಾವಿ ಸಭೆ:

ಕೊಪ್ಪಳ ನಗರದಲ್ಲಿ ಜ. 6ರಂದು ಇಡೀ ದಿನ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೊಪ್ಪಳದ ಬಂದ್‌ ಕರೆಯ ಅಂತಿಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಾದಿಗ, ಚಲವಾದಿ, ಮುಸ್ಲಿಮ್, ಕ್ರಿಶ್ಚಿಯನ್, ಮ್ಯಾದರ್, ಲಂಬಾಣಿ ಸಮಾಜ, ಲಿಂಗಾಯತ, ಹಾಲುಮತ, ವಾಲ್ಮೀಕಿ, ಭೋವಿ, ಭಜಂತ್ರಿ, ಮಡಿವಾಳ, ಮೋಚಿ, ಹಡಪದ, ಪಂಚಮಸಾಲಿ, ಸುಡುಗಾಡು ಸಿದ್ದರ, ಚನ್ನದಾಸರ, ಶಿಳ್ಳೆಕ್ಯಾತರ, ಸವಿತಾ ಸೇರಿದಂತೆ ಅನೇಕ ಸಮಾಜದ ಸಂಘಟನೆಗಳು ಹಾಗೂ ಯುವಕರ ಸಂಘ, ದಲಿತ ಸಂಘಟನೆಗಳು, ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಸಂಘಟನೆ, ಮಾನವ ಹಕ್ಕುಗಳ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವಕೀಲರ ಸಂಘ, ಕಾರ್ಮಿಕರ ಸಂಘ, ನೌಕರರ ಸಂಘ, ಮುಸ್ಲಿಮ್ ಪಂಚ್ ಕಮಿಟಿಗಳು, ಪಾಸ್ಟರ್ಸ್ ಅಸೋಸಿಯೇಷನ್, ಕಾರ್ ಟ್ಯಾಕ್ಸಿಗಳ, ಆಟೋ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳ ಸಂಘ, ನೌಕರರ ಸಂಘ, ಮಾಲೀಕರ ಸಂಘ, ವರ್ತಕರ ಸಂಘ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲಿಸಿದ್ದು, ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಹಿರಿಯ ಮುಖಂಡ ಅಲ್ಲಮ ಪ್ರಭು ಬೆಟ್ಟದೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ರಾಮಣ್ಣ ಚೌಡಕಿ, ಮಂಜುನಾಥ್ ಗೊಂಡಬಾಳ, ಪರಶುರಾಮ್ ಕೆರೆಹಳ್ಳಿ, ಕೌಸರ್ ಕೋಲ್ಕಾರ್, ಕೆ.ಬಿ. ಗೋನಾಳ್, ಬಸವರಾಜ್ ಪೂಜಾರ್, ಸಲೀಮ್ ಖಾದ್ರಿ, ಆದಿಲ್ ಪಟೇಲ್, ರಮೇಶ್ ಗಿಣಿಗೇರಿ, ಕಾಶಪ್ಪ ಚಲವಾದಿ, ಈಶಣ್ಣ ಕೊರ್ಲಳ್ಳಿ ಮುಂತಾದವರಿದ್ದರು.