ಕಾರ್ಖಾನೆ ಸ್ಥಾಪನೆ ವಿರೋಧಿಸಿ ಇಂದು ಕೊಪ್ಪಳ, ಭಾಗ್ಯನಗರ ಬಂದ್

| Published : Feb 24 2025, 12:31 AM IST

ಕಾರ್ಖಾನೆ ಸ್ಥಾಪನೆ ವಿರೋಧಿಸಿ ಇಂದು ಕೊಪ್ಪಳ, ಭಾಗ್ಯನಗರ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿ, ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದ್ದು, ಶಾಲಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ

ಕೊಪ್ಪಳ: ಕೊಪ್ಪಳ ಬಳಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆ. 24ರಂದು ಕೊಪ್ಪಳ ತಾಲೂಕು ಪರಿಸರ ಹಿತಕ್ಷಣಾ ವೇದಿಕೆ ಕರೆ ನೀಡಿರುವ ಕೊಪ್ಪಳ ಮತ್ತು ಭಾಗ್ಯನಗರ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹತ್ತಾರ ಸ್ವಾಮೀಜಿಗಳು, ಯುಸೂಫಿಯಾ ಮಸೀದಿಯ ಮುಸ್ಲಿಂ ಧರ್ಮಗುರುಗಳು, ಕ್ರೈಸ್ತ ಧರ್ಮ ಗುರುಗಳು ಸಹ ಬೆಂಬಲ ಘೋಷಿಸಿದ್ದಾರೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿ, ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದ್ದು, ಶಾಲಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ: ಕಾರ್ಖಾನೆ ಸ್ಥಾಪನೆ ವಿರೋಧಿಸಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಪ್ರಗತಿಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಶಾಲಾ ಶಿಕ್ಷಣ ಸಂಸ್ಥೆಗಳು, ಸಹಕಾರಿ ಬ್ಯಾಂಕ್ ಅಸೋಸಿಯೇಶನ್‌, ವರ್ತಕರ ಸಂಘ, ಎಪಿಎಂಸಿ ಹಮಾಲರ ಸಂಘ, ಕೊಪ್ಪಳ ಜಿಲ್ಲಾ ಹಮಾಲರ ಸಂಘ, ಬಂಡಿ ಹಮಾಲರ ಸಂಘ, ಸವಿತಾ ಸಮಾಜ ಸೇರಿದಂತೆ 100ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಜೈನ್ ಸಮಾಜ, ಅಲ್ಪಸಂಖ್ಯಾತ ಸಮಾಜ, ವೀರಶೈವ ಲಿಂಗಾಯತ ಸಮಾಜ, ವಿವಿಧ ಹಿಂದೂ ಸಮಾಜ, ಅಖಿಲ ಭಾರತ ಲಿಂಗಾಯತ ಮಹಾಸಭಾ ಸೇರಿದಂತೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಇದಕ್ಕಿಂತ ಮಿಗಿಲಾಗಿ ಆಟೋ ಮಾಲೀಕರ ಮತ್ತು ಚಾಲಕರ ಸಂಘ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ.

ಇದೇ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘವೂ ಬಂದ್‌ಗೆ ಬೆಂಬಲ ನೀಡಿ, ಬಂಕ್ ಬಂದ್ ಮಾಡುತ್ತಿವೆ.

ಮೆರವಣಿಗೆ: ಶ್ರೀ ಗವಿಸಿದ್ಧೇಶ್ವರ ಮಠದ ಆವರಣದಿಂದ ಬೆಳಗ್ಗೆ 9 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬಳಿಕ ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ಮೆರವಣಿಗೆ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಲಿದೆ.

ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿದೆ.

20 ಸಾವಿರಕ್ಕೂ ಅಧಿಕ ಜನರು ಭಾಗಿ:ಈಗಾಗಲೇ ಘೋಷಿತ ಸಂಘಟನೆಗಳು ಸೇರಿದಂತೆ ಬೆಂಬಲ ನೀಡಿರುವ ಸಮಾಜದ ಸಂಘಟನೆಗಳು ನೀಡಿರುವ ಮಾಹಿತಿಯ ₹ 20 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಹಾಗೂ ಎಲ್ಲ ಧರ್ಮ ಗುರುಗಳು ಸಹ ಭಾಗಿಯಾಗುತ್ತಿರುವುದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 50 ಸಾವಿರಕ್ಕೂ ಅಧಿಕವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ.

ಕೊಪ್ಪಳ ಚರಿತ್ರೆಯಲ್ಲಿಯೇ ಮೊದಲು: ಕೊಪ್ಪಳ ಬಂದ್ ಅನೇಕ ಬಾರಿ ವಿವಿಧ ಕಾರಣಗಳಿಗಾಗಿ ಮಾಡಲಾಗಿದೆ. ಆದರೆ, ಕೊಪ್ಪಳ ಚರಿತ್ರೆಯಲ್ಲಿಯೇ ಇದೇ ಮೊದಲ ಬಾರಿಗೆ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ಎಲ್ಲ ಧರ್ಮದವರು ಒಗ್ಗೂಡಿ ಪ್ರತಿಭಟನೆ ಮಾಡುತ್ತಿವೆ. ಹೀಗಾಗಿ, ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಕೊಪ್ಪಳ ಬಂದ್‌ಗೆ ಹಳ್ಳಿ, ನಗರ ಪ್ರದೇಶದಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಿರೀಕ್ಷೆ ಬೆಂಬಲ ವ್ಯಕ್ತವಾಗಿರುವುದರಿಂದ ಬಂದ್ ಯಶಸ್ವಿಯಾಗಲಿದೆ ಎಂದು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ ಶರಣಪ್ಪ ಸಜ್ಜನ ಹೇಳಿದರು.

ಕಾರ್ಖಾನೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ಹೋರಾಟದಲ್ಲಿ ನಾವು ಸಹ ಭಾಗವಹಿಸುತ್ತಿದ್ದೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ನೇತೃತ್ವ ವಹಿಸಿರುವುದರಿಂದ ಹೋರಾಟಕ್ಕೆ ಆನೆಬಲ ಬಂದಿದ್ದು, ಜತೆಗೆ ಎಲ್ಲ ಧರ್ಮ ಗುರುಗಳು, ಎಲ್ಲ ಪಕ್ಷದವರು ಭಾಗವಹಿಸಿರುವುದು ವಿಶೇಷ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯಸಿ.ವಿ. ಚಂದ್ರಶೇಖರ ಹೇಳಿದರು.

ಕೊಪ್ಪಳ ಬಂದ್‌ಗೆ ಗವಿಮಠ ಶ್ರೀಗಳು ಸೇರಿದಂತೆ ಪಕ್ಷಾತೀತವಾಗಿ ಎಲ್ಲರೂ ಬಂದ್ ಮಾಡಿರುವುದರಿಂದ ಸರ್ಕಾರದ ಕಣ್ಣು ತೆರೆಸುವ ಮತ್ತು ಕಾರ್ಖಾನೆ ತೊಲಗುವ ಕಾರ್ಯ ಆಗುವಂತೆ ಬಂದ್ ಆಗಲಿದೆ ಎಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ ತಿಳಿಸಿದ್ದಾರೆ.