ಸಾರಾಂಶ
ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ಶುಕ್ರವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅವರ ಜತೆಗೆ ಶಾಸಕ ಬಿ.ಎಂ. ನಾಗರಾಜ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಹಿರಿಯ ವಕೀಲರಾದ ಆಸಿಫ್ ಅಲಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ ಇದ್ದರು.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶಗಳು ಇದ್ದು, ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೇಳಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ, ರೈಲು ಮಾರ್ಗಗಳ ನಿರ್ಮಾಣ ಹಾಗ ಹೆದ್ದಾರಿಗಳನ್ನು ಸಂಪರ್ಕಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.ನೀರಾವರಿ ಯೋಜನಗಳಿಗೂ ಆದ್ಯತೆ ನೀಡಲಾಗುವುದು ಮತ್ತು ಈಗಾಗಲೇ ಸಿ.ಎಂ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಸಾಮರ್ಥ್ಯ ಕುಸಿದಿದ್ದು, ಇದಕ್ಕೆ ಪರ್ಯಾಯವಾಗಿ ನವಲಿ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ಆದ್ಯತೆ ನೀಡಲಾಗುತ್ತಿದೆ ಎಂದರು.ಸಂಸದ ಸಂಗಣ್ಣ ಕರಡಿ ಅವರು ಹಿರಿಯರಾಗಿದ್ದು, ಅವರು ಸಹ ಕಾಂಗ್ರೆಸ್ ಬರುತ್ತಾರೆ ಎನ್ನುವ ಚರ್ಚೆ ನಡೆದಿದೆ ಹಾಗೂ ಆಹ್ವಾನ ಮಾಡಲಾಗಿದೆ. ಇದನ್ನು ಹಿರಿಯರು ನೋಡಿಕೊಳ್ಳುತ್ತಾರೆ ಎಂದರು.
ರಾಜಶೇಖರ ಹಿಟ್ನಾಳ್ 19.60 ಕೋಟಿ ಆಸ್ತಿ ಒಡೆಯ:ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ₹19.60 ಕೋಟಿಯ ಚರ-ಸ್ಥಿರಾಸ್ಥಿಯ ಒಡೆಯನಾಗಿದ್ದು, ಪತ್ನಿಯೂ ₹9.36 ಕೋಟಿಯ ಒಡತಿಯಾಗಿದ್ದಾಳೆ.
ಪತ್ನಿ ಆಸ್ತಿ ಒಳಗೊಂಡಂತೆ ರಾಜಶೇಖರ ಹಿಟ್ನಾಳ ಅವರ ಆಸ್ತಿ ₹28.96 ಕೋಟಿ.ರಾಜಶೇಖರ ಹಿಟ್ನಾಳ ಅವರ ಬಳಿ 305 ಗ್ರಾಂ ಚಿನ್ನ ಇದ್ದರೆ, ಪತ್ನಿಯ ಬಳಿ 970 ಗ್ರಾಂ ಚಿನ್ನವಿದೆ. ಅದರ ಜತೆಗೆ ರಾಜಶೇಖರ ಬಳಿ ಇನ್ನೋವಾ, ಫಾರ್ಚುನರ್ ಕಾರು ಸೇರಿದಂತೆ ಹಲವು ವಾಹನಗಳಿವೆ. ಅವುಗಳ ಮೌಲ್ಯವೇ ಕೋಟ್ಯಂತರ ರುಪಾಯಿ ಆಗಿದೆ.ಪತಿಯ ಬಳಿ ಇರುವ 305 ಗ್ರಾಂ ಬಂಗಾರದ ಮೌಲ್ಯ ₹14 ಲಕ್ಷ ಆಗಿದ್ದರೆ, ಪತ್ನಿಯ ಬಳಿ ಇರುವ 970 ಗ್ರಾಂ ಬಂಗಾರದ ಮೌಲ್ಯ ₹10 ಲಕ್ಷ ಮಾತ್ರ ಎಂದು ನಮೂದಿಸಿರುವುದು ಸೋಜಿಗ ಮೂಡಿಸಿದೆ.ಬಂಗಾರ, ಒಡವೆ, ಬೆಳ್ಳಿ, ವಾಹನಗಳು ಸೇರಿದಂತೆ ಚರಾಸ್ಥಿಗಳ ಮೌಲ್ಯ ₹14.17 ಕೋಟಿಯದ್ದಾಗಿದ್ದರೆ, ಹೊಲ, ಮನೆ ಹಾಗೂ ನಗರ ಪ್ರದೇಶದ ನಿವೇಶನಗಳನ್ನೊಳಗೊಂಡು ಮಾರುಕಟ್ಟೆ ಮೌಲ್ಯ ₹5.43 ಕೋಟಿ ಎಂದು ತೋರಿಸಿದ್ದಾರೆ. ಇದೆಲ್ಲ ಲೆಕ್ಕಾಚಾರದಲ್ಲಿ ರಾಜಶೇಖರ ಹಿಟ್ನಾಳ ಅವರ ವೈಯಕ್ತಿಕ ಆಸ್ತಿಯ ಮೊತ್ತ ₹19.60 ಕೋಟಿ.
₹10.88 ಕೋಟಿ ಸಾಲ:ರಾಜಶೇಖರ ಹಿಟ್ನಾಳ ಅವರು ತಮ್ಮ ಆಸ್ತಿಯ ವಿವರದಲ್ಲಿ ₹10.88 ಕೋಟಿ ವಿವಿಧ ಬ್ಯಾಂಕಿನಲ್ಲಿ ಸಾಲದ ಹೊಣೆಗಾರರಾಗಿದ್ದರೆ, ಅವರ ಪತ್ನಿ ₹1.73 ಕೋಟಿ ಸಾಲದ ಹೊಣೆಗಾರರಾಗಿದ್ದಾರೆ.ಬರಬೇಕಾದ ಸಾಲ: ಅದರ ಜತೆಗೆ ವಿವಿಧೆಡೆ ಮಾಡಿರುವ ಹೂಡಿಕೆ ಮತ್ತು ನೀಡಿರುವ ಸಾಲದ ವಿವರದಲ್ಲಿ ಬರಬೇಕಾಗಿರುವುದು ₹4.54 ಕೋಟಿ ಎನ್ನುವುದು ವಿಶೇಷ.5 ಪಟ್ಟು ಸಾಲ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ನೀಡಿದ ಆಸ್ತಿಯ ವಿವರಕ್ಕಿಂತಲೂ ಈಗ 5 ಪಟ್ಟು ಅಧಿಕ ಸಾಲವನ್ನು ಮಾಡಿದ್ದಾರೆ. 2019ರಲ್ಲಿ ₹2 ಕೋಟಿ ಇದ್ದ ಸಾಲ ಈಗ ₹10.88 ಕೋಟಿ ಆಗಿದೆ. ಹಾಗೆಯೇ ಆಸ್ತಿಯೂ ಬರೋಬ್ಬರಿ ಹೆಚ್ಚಳವಾಗಿದ್ದು, ಚರ- ಸ್ಥಿರಾಸ್ಥಿ ಸೇರಿ ₹6 ಕೋಟಿ ಇದ್ದ ಆಸ್ತಿ ಐದು ವರ್ಷದಲ್ಲಿ ₹19 ಕೋಟಿ ಆಗಿರುವುದು ಸಹ ವಿಶೇಷ.
ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ: ತಾಲೂಕಿನ ಹಿಟ್ನಾಳ ಗ್ರಾಮದ ಬನ್ನಿಮಹಾಕಾಳಮ್ಮ ದೇವಸ್ಥಾನದಿಂದ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಶನಿವಾರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪಾದಯಾತ್ರೆ ಮೂಲಕ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯುದ್ದಕ್ಕೂ ಸಾಥ್ ನೀಡಿದರು.ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಎಸ್.ಬಿ. ನಾಗರಳ್ಳಿ, ಆಸೀಫ್ ಅಲಿ, ಗೂಳಪ್ಪ ಹಲಗೇರಿ ಇತರರು ಇದ್ದರು.