ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿಯಾಗಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ನೇಮಕಗೊಂಡಿರುವ ಬೆನ್ನಲ್ಲೇ, ಅವರ ಪದಗ್ರಹಣ ಸಮಾರಂಭಕ್ಕೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಯಾರೆಲ್ಲ ಆಗಮಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿಯಾಗಿ ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ನೇಮಕಗೊಂಡಿರುವ ಬೆನ್ನಲ್ಲೇ, ಅವರ ಪದಗ್ರಹಣ ಸಮಾರಂಭಕ್ಕೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಯಾರೆಲ್ಲ ಆಗಮಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಅ. 2ರಂದು ಕೊಪ್ಪಳದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭ ಜಿಲ್ಲೆಯ ಕಾಂಗ್ರೆಸ್‌ನೊಳಗಿನ ರಾಜಕೀಯ ಸಮೀಕರಣಗಳಿಗೂ ವೇದಿಕೆಯಾಗುವ ಸಾಧ್ಯತೆ ಇದೆ. ಎಐಸಿಸಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯಲ್ಲಿ ಕೊಪ್ಪಳಕ್ಕೆ ಎಂ. ಮಲ್ಲಿಕಾರ್ಜುನ ನಾಗಪ್ಪ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾಧ್ಯಕ್ಷರ ಆಯ್ಕೆಗೂ ಮುನ್ನ ಪಕ್ಷದ ವೀಕ್ಷಕರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಿದ್ದರೂ, ಅದನ್ನು ಕಡೆಗಣಿಸಿ ಅಂತಿಮವಾಗಿ ನಾಗಪ್ಪ ಅವರಿಗೆ ಜವಾಬ್ದಾರಿ ನೀಡಿರುವುದು ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.

ನೂತನ ಜಿಲ್ಲಾಧ್ಯಕ್ಷರ ಪದಗ್ರಹಣಕ್ಕೆ ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ, ಹಾಲಿ ಹಾಗೂ ಮಾಜಿ ಶಾಸಕರು ಸೇರಿದಂತೆ ಪ್ರಮುಖ ಮುಖಂಡರು ಆಗಮಿಸುವ ನಿರೀಕ್ಷೆಯಿದೆ. ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮುಖಂಡರ ಸಂಖ್ಯೆ ಲೆಕ್ಕಾಚಾರ ನಡೆದಿದೆ.

ಭಿನ್ನಾಭಿಪ್ರಾಯಕ್ಕೆ ಜಾಗವಿಲ್ಲ: ನೂತನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಅವರು ನೇಮಕವನ್ನು ಹೈಕಮಾಂಡ್ ತೀರ್ಮಾನ ಎಂದು ಹೇಳಿದ್ದು, ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟನೆ ಬಲಪಡಿಸುವುದೇ ತಮ್ಮ ಮುಂದಿನ ಆದ್ಯತೆ ಎಂಬ ಸಂದೇಶ ನೀಡಿದ್ದಾರೆ.

ಅನ್ಸಾರಿ ನಡೆ ಏನು?: ಇದೇ ವೇಳೆ ಗಂಗಾವತಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಡೆ ಕುತೂಹಲ ಮೂಡಿಸಿದೆ. ಸ್ವಪಕ್ಷೀಯರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದ ಹಿನ್ನೆಲೆಯಲ್ಲಿ ಕೆಪಿಸಿಸಿ ಅನ್ಸಾರಿ ಅವರಿಗೆ ಶೋಕಾಸ್ ನೋಟಿಸ್ ನೀಡಿರುವುದು ಈಗಾಗಲೇ ಬಹಿರಂಗವಾಗಿದೆ.

ಹೀಗಾಗಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಅನ್ಸಾರಿ ಆಗಮಿಸುತ್ತಾರೆಯೇ ಎಂಬುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅನ್ಸಾರಿ ಕಾಂಗ್ರೆಸ್‌ನಲ್ಲೇ ಮುಂದುವರಿಯುವುದಾಗಿ ಈ ಹಿಂದೆ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು.

ಮತ್ತೆ ಮುನ್ನೆಲೆಗೆ ‘ಗಂಗಾವತಿ ವೈಟ್ ಹೌಸ್’: ಕಾಂಗ್ರೆಸ್‌ನ ಗಂಗಾವತಿ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಪ್ರಭಾವ ಬೀರಿದ್ದ ‘ವೈಟ್ ಹೌಸ್’ ಇದೀಗ ಮತ್ತೊಮ್ಮೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಮಾಜಿ ಸಂಸದ ಎಚ್.ಜಿ. ರಾಮುಲು ಅವರ ರಾಜಕೀಯ ವಲಯದೊಂದಿಗೆ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದೊರೆತಿರುವುದು ಗಂಗಾವತಿಯ ರಾಜಕೀಯ ಸಮೀಕರಣಗಳಿಗೆ ಹೊಸ ಆಯಾಮ ನೀಡಿದೆ ಎಂಬ ಚರ್ಚೆ ಪಕ್ಷದೊಳಗಿದೆ.

ಈ ಹಿಂದೆ ನಾಗಪ್ಪ ಅವರು ಎಚ್.ಜಿ. ರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆ ಕುರಿತು ಮಾತನಾಡಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸುವುದಾಗಿ ಅವರು ಹೇಳಿದ್ದರು. ಹೀಗಾಗಿ ಮಲ್ಲಿಕಾರ್ಜುನ ನಾಗಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ, ಯಾರು ಗೈರಾಗುತ್ತಾರೆ ಮತ್ತು ಪ್ರಮುಖ ಮುಖಂಡರು ಯಾವ ಸಂದೇಶ ನೀಡುತ್ತಾರೆ ಎಂಬುದೇ ಇದೀಗ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನಲ್ಲಿ ಪ್ರಮುಖ ಚರ್ಚೆಯಾಗಿದೆ.

ಪದಗ್ರಹಣ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಲಾಗಿದೆ. ಎಲ್ಲರೂ ಆಗಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.