ಸಾರಾಂಶ
ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪ್ರಸಾದ ತಯಾರಿಕೆಗೆ ನೂರು ಕ್ವಿಂಟಲ್ ಅಕ್ಕಿ ಬಳಕೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 25 ಕ್ವಿಂಟಲ್ ಹೆಚ್ಚು ಬಳಕೆಯಾದ ಅಕ್ಕಿಯಿಂದಾಗಿ ಭಕ್ತರೂ ಹೆಚ್ಚು ಬಂದಂತಾಗಿದೆ.
ಕೊಪ್ಪಳ: ಅನ್ನ ಅಕ್ಷರ ದಾಸೋಹಕ್ಕೆ ಹೆಸರುವಾಸಿಯಾದ ಕೊಪ್ಪಳ ಗವಿಸಿದ್ಧೇಶ್ವರ ಮಠದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವದ ರಥೋತ್ಸವದ ದಿನವೇ ಬರೋಬ್ಬರಿ ಎರಡು ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಈವರೆಗೂ ನಡೆದ ಜಾತ್ರೆಯ ಮಹಾದಾಸೋಹದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸಿರುವುದು ಇದೇ ಮೊದಲು ಎನ್ನುವುದು ಗಮನಾರ್ಹ.
100 ಕ್ವಿಂಟಲ್ ಅಕ್ಕಿ: ಮಹಾರಥೋತ್ಸವ ದಿನ ಅನ್ನ ದಾಸೋಹಕ್ಕೆ ಬರೋಬ್ಬರಿ 100 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಮಹಾದಾಸೋಹದಲ್ಲಿ ಸಿಹಿ, ರೊಟ್ಟಿಗಳ ಬಳಕೆ ಲೆಕ್ಕವೇ ಇಲ್ಲದಂತಾಗಿದೆ. ಜಾತ್ರೆಗೆ 8 ಲಕ್ಷ ಶೇಂಗಾ ಹೋಳಿಗೆ, 15 ಲಕ್ಷಕ್ಕೂ ಅಧಿಕ ರೊಟ್ಟಿಗಳು ಬಂದಿದ್ದು, ಬೇಡಿಕೆಗೆ ತಕ್ಕಂತೆ ಬಳಕೆ ಮಾಡಲಾಗುತ್ತದೆ.