ಸಾರಾಂಶ
ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಹಣ ಬಿಡುಗಡೆ ಮಾಡಬೇಕು. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಒಣ ಬೇಸಾಯ ಅವಲಂಬಿಸಿರುವ ರೈತರಿಗೆ ಕೃಷ್ಣ ಬಿ-ಸ್ಕಿಮ್ ಯೋಜನೆ ನನೆಗುದಿಗೆ ಬಿದ್ದಿದ್ದು ಕೂಡಲೇ ಅನುಷ್ಠಾನಗೊಳಿಸಬೇಕು.
ಕುಷ್ಟಗಿ:
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಯುವ ಘಟಕದ ಅಧ್ಯಕ್ಷ ದೇವರಾಜ ಹಜಾಳದಾರ ಮಾತನಾಡಿ, ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಹಣ ಬಿಡುಗಡೆ ಮಾಡಬೇಕು. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಒಣ ಬೇಸಾಯ ಅವಲಂಬಿಸಿರುವ ರೈತರಿಗೆ ಕೃಷ್ಣ ಬಿ-ಸ್ಕಿಮ್ ಯೋಜನೆ ನನೆಗುದಿಗೆ ಬಿದ್ದಿದ್ದು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಜಮೀನಿನಲ್ಲಿ ರಾತ್ರಿ ವಾಸಿಸುವ ಮನೆಗಳಿಗೆ ನಿರಂತರ ವಿದ್ಯುತ್, ನೀರಾವರಿ ಪಂಪ್‌ಸೆಟ್‌ಗಳಿಗೆ 10 ತಾಸು ವಿದ್ಯುತ್ ಪೂರೈಕೆ, ವಿಷಜಂತುಗಳು ಕಚ್ಚಿ ಮೃತಪಟ್ಟ ರೈತರಿಗೆ ತಹಸೀಲ್ದಾರ್ ₹ 10 ಲಕ್ಷ ಪರಿಹಾರ ನೀಡಲು ಸೂಚಿಸುವುದು, ರಸ್ತೆಗಳ ಸುಧಾರಣೆ, ರೈತರ ಸಾಲಮನ್ನಾ, ಬಣವಿಗೆ ಬೆಂಕಿ ಬಿದ್ದು ಸುಟ್ಟರೆ ಹಾಗೂ ಜಾನುವಾರು ಮೃತಪಟ್ಟರೆ ಪರಿಹಾರ ನೀಡುವುದು, ತಾಲೂಕಿನಲ್ಲಿ ವೀಂಡ್ ಪ್ಯಾನ್‌ಗಳಿಗೆ ಕಡಿವಾಣ, ಕುಷ್ಟಗಿ ಕ್ಷೇತ್ರಕ್ಕೆ ಸ್ನಾತಕೋತ್ತರ ಕಾಲೇಜು ಮಂಜೂರು, ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು, ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆ, ಸರ್ಕಾರಿ ಐಟಿಐ ಕಾಲೇಜು, ಮಹಿಳಾ ಕಾಲೇಜು ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಯಿತು.ಶಾಸಕರು ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನ ತರಲಾಗುವುದು ಎಂದು ತಿಳಿಸಿದರು. ಈ ವೇಳೆ ವಿಠ್ಹಲ್ ಶಿರವಾರ, ಬಸವರಾಜ ಲಿಂಗಸಗೂರು, ತೊಂಡೆಪ್ಪ ಚೂರಿ, ಹೊನ್ನಪ್ಪ ತಳವಾರ ಸೇರಿದಂತೆ ಅನೇಕರು ಇದ್ದರು.