ಕೊಪ್ಪಳ ನಗರಸಭೆ ಉಪಚುನಾವಣೆಗೆ ಜಿದ್ದಾಜಿದ್ದಿ

| Published : Nov 23 2024, 12:34 AM IST

ಸಾರಾಂಶ

ಸ್ಥಳೀಯ ನಗರಸಭೆಯ ೮ ಮತ್ತು ೧೧ನೇ ವಾರ್ಡ್ ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ (ನ. ೨೩ರಂದು) ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಮತಗಟ್ಟೆಗಳು ಸಿದ್ಧವಾಗಿವೆ.

ಕೊಪ್ಪಳ: ಸ್ಥಳೀಯ ನಗರಸಭೆಯ ೮ ಮತ್ತು ೧೧ನೇ ವಾರ್ಡ್ ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ (ನ. ೨೩ರಂದು) ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಮತಗಟ್ಟೆಗಳು ಸಿದ್ಧವಾಗಿವೆ.

ವಾರ್ಡ ೮ರಲ್ಲಿ ೭೦೬ ಪುರುಷ ಹಾಗೂ ೭೦೧ ಮಹಿಳಾ ಮತದಾರರು ಸೇರಿ ಒಟ್ಟು ೧೪೦೭ ಮತದಾರರಿದ್ದಾರೆ. ಮತದಾನ ನಗರದ ಬ್ರಹ್ಮನವಾಡಿ ಶಾಲೆಯಲ್ಲಿ ನಡೆಯಲಿದೆ. ಇದೇ ವೇಳೆ ವಾರ್ಡ್ ೧೧ರಲ್ಲಿ ೫೩೪ ಪುರುಷ ಹಾಗು ೫೩೩ ಮಹಿಳಾ ಮತದಾರರು ಸೇರಿ ಒಟ್ಟು ೧೦೮೭ ಮತದಾರರಿದ್ದಾರೆ. ಸಿಪಿಸಿ ಶಾಲೆಯಲ್ಲಿ ಮುಂಜಾನೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ಮತದಾನ ನಡೆಯಲಿದೆ.

ಮತಗಟ್ಟೆಯಲ್ಲಿ ಈಗಾಗಲೇ ಸಿದ್ಧತೆ ನಡೆದಿದ್ದು, ಮತದಾರರ ಎಡಗೈ ಹೆಬ್ಬೆರಳಿಗೆ ಶಾಹಿ ಹಚ್ಚಲಾಗುವುದು. ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ತಿಳಿಸಿದ್ದಾರೆ.

ವಾರ್ಡ್ ೮ಕ್ಕೆ (ಹಿಂದುಳಿದ ವರ್ಗ -ಅ ಮಹಿಳೆ ) ಕಾಂಗ್ರೆಸ್ ನಿಂದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ, ಬಿಜೆಪಿಯಿಂದ ಕವಿತಾ ಬಸವರಾಜ ಗಾಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡ್ ನಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಸುನಿತಾ ಗಾಳಿ ಸರಕಾರಿ ನೌಕರಿ ದೊರೆತ ಕಾರಣಕ್ಕೆ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಉಪ ಚುನಾವಣೆ ಜರುಗುತ್ತಿದೆ.

ವಾರ್ಡ್ ೧೧ಕ್ಕೆ (ಹಿಂದುಳಿದ ವರ್ಗ- ಅ) ಕಾಂಗ್ರೆಸ್ ನಿಂದ ರಾಜಶೇಖರ ಆಡೂರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವಾರ್ಡ್ ನಿಂದ ಬಿಜೆಪಿಯಿಂದ ಗೆದ್ದಿದ್ದ ಆಡೂರ ಲೋಕಸಭಾ ಚುನಾವಣೆ ಮುಂಚೆ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ ಉಪಚುನಾವಣೆ ನಡೆಯುತ್ತಿದೆ. ಇದೇ ವಾರ್ಡ್ ಗೆ ಬಿಜೆಪಿಯಿಂದ ಚೆನ್ನಬಸಪ್ಪ ಗವಿಸಿದ್ದಪ್ಪ ಗಾಳಿ ನಾಮಪತ್ರ ಸಲ್ಲಿಸಿದರು. 8 ಮತ್ತು 11ನೇ ವಾರ್ಡಿನಲ್ಲಿ ಚುನಾವಣೆ ಕಾವು ಜೋರಿದೆ. ಎರಡೂ ವಾರ್ಡಿನಲ್ಲಿ ಬಲಾಬಲ ಪ್ರತಿಷ್ಠೆಯ ಕಣವಾಗಿದೆ.